ರವಿಕೃಷ್ಣಾ ರೆಡ್ಡಿ ನಾಯಕತ್ವದ ಕೆ.ಆರ್.ಎಸ್ ಪಕ್ಷ ರಾಜ್ಯದ ಪೊಲೀಸ್ ಠಾಣೆಗಳ ಕಥೆಯೇನು ಅನ್ನುವುದನ್ನು ಬಹಿರಂಗಪಡಿಸಿತ್ತು. ಆದರೆ ಬೊಮ್ಮಾಯಿ ನೇತೃತ್ವದ ಸರ್ಕಾರದ ಕಣ್ಣಿಗೆ ಕಾಣಿಸಲಿಲ್ಲ, ಕಿವಿಗೆ ಕೇಳಲಿಲ್ಲ. ಈಗ ಅದರ ಫಲ ಅನ್ನುವಂತೆ ಕಲಾಸಿಪಾಳ್ಯದ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ( Kalasipalyam police suspended) ಅಮಾನತುಗೊಂಡಿದ್ದಾರೆ
ಬೆಂಗಳೂರು : ರೌಡಿಯೊಬ್ಬನ ವಿರುದ್ಧ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನಲೆಯಲ್ಲಿ ಕಲಾಸಿಪಾಳ್ಯ ಠಾಣೆ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಸೇರಿ ಇಬ್ಬರನ್ನು ಅಮಾನತು ( Kalasipalyam police suspended) ಮಾಡಲಾಗಿದೆ. ಅಮಾನತುಗೊಂಡವರನ್ನು ಇನ್ಸ್ ಪೆಕ್ಟರ್ ಎಂ.ಎಲ್. ಚೇತನ್ ಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಪ್ರಸನ್ನಕುಮಾರ್ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ…?
ಬೆಂಗಳೂರಿನ ಸಿದ್ದಯ್ಯ ರಸ್ತೆಯ 2ನೇ ಕ್ರಾಸ್ ನಲ್ಲಿ ನೆಲೆಸಿರುವ ಮುಯೀಜ್ ಅಹಮ್ಮದ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಈ ನಡುವೆ ಶಿವಾಜಿನಗರದ ಆಸ್ತಿ ವಿಚಾರವಾಗಿ ಅಹಮದ್ ಮತ್ತು ರಿಯಾಜ್ ನಡುವೆ ವಿವಾದ ಉಂಟಾಗಿತ್ತು. ಈ ವೇಳೆ ಸಮಸ್ಯೆ ಇತ್ಯರ್ಥ ಪಡಿಸಲು ರಿಯಾಜ್, ಶಿವಾಜಿ ನಗರದ ರೌಡಿ ಸಲೀಂ ಅಲಿಯಾಸ್ ಬಾಂಬೆ ಸಲೀಂನ ಸಹಚರರನ್ನು ಸಂಪರ್ಕಿಸಿದ್ದ.
ಇದಾದ ಬಳಿಕ ಸಲೀಂ ಸಹಚರರಾದ ಝಾಪರ್ ಮತ್ತು ಆಲಿ ಎಂಬವರು ಮುಯೀಜ್ ಅಹಮ್ಮದ್ ಮನೆಗೆ ತೆರಳಿ ವಿವಾದವನ್ನು ಬಗೆ ಹರಿಸಿಕೊಳ್ಳುವಂತೆ ರಿಯಾಜ್ ಪರವಾಗಿ ಒತ್ತಾಯಿಸಿದ್ದರು. ಮಾತ್ರವಲ್ಲದೆ ಜೈಲಿನಿಂದಲೇ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದ ಬಾಂಬೆ ಸಲೀಂ 8 ಲಕ್ಷ ರೂಪಾಯಿ ಕೊಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಕಾಸು ಕೊಡದ ಕಾರಣ ಸಲೀಂ ಸಹಚರರು ಕಾರು ಅಡ್ಡಗಟ್ಟಿ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ : Ravikanthe gowda ips : ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ : ರವಿಕಾಂತೇಗೌಡ ಸೂಚನೆ
ಈ ಸಂಬಂಧ ಮುಯೀಜ್ ಅಹಮ್ಮದ್ ಕಲಾಸಿಪಾಳ್ಯ ಠಾಣೆಗೆ ತೆರಳಿ ಚೇತನ್ ಕುಮಾರ್ ( M L Chethan Kumar ) ಅವರಿಗೆ ದೂರು ಸಲ್ಲಿಸಿದ್ದರು. ಈ ವೇಳೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ NCR ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಜೈಲಿನಿಂದ ಜೀವ ಬೆದರಿಕೆ ಬರುವುದು ಹೆಚ್ಚಾಯ್ತು. ಹೀಗಾಗಿ ಆತಂಕಗೊಂಡ ಮುಯೀಜ್ ಅಹಮ್ಮದ್ ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಗೆ ( Alok Mohan IPS ) ದೂರು ಸಲ್ಲಿಸಿದರು.
ಅಲೋಕ್ ಮೋಹನ್ ( Alok Mohan IPS ) ಈ ದೂರನ್ನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ರವಾನಿಸಿದರು. ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ( ch pratap reddy ips ) ಈ ಬಗ್ಗೆ ವಿಚಾರಣೆ ನಡೆಸುವಂತೆ ಸಿಸಿಬಿಗೆ ಸೂಚನೆ ಕೊಟ್ಟರು.
ಆಯುಕ್ತರ ( ch pratap reddy ips ) ಸೂಚನೆಯಂತೆ ಕಲಾಸಿಪಾಳ್ಯ ಠಾಣೆಯಲ್ಲಿ ಅಹಮದ್ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಬಾಂಬೆ ಸಲೀಂ ಸಹಚರರಾದ ಅಬ್ದುಲ್ ಜಾಫರ್, ಶೂಟರ್ ಖದೀಮ, ಇಮ್ರಾನ್, ಬಾಂಬೆ ರಿಯಾಜ್, ಖದೀರ್ ಹಾಗೂ ಆಲಿಯನ್ನು ಬಂಧಿಸಿದ್ದಾರೆ. ಧಾರವಾಡ ಕೇಂದ್ರ ಜೈಲಿನಲ್ಲಿದ್ದ ಬಾಂಬೆ ಸಲೀಂನನ್ನು ವಾರೆಂಟ್ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಬಳಿಕ ಸಿಸಿಬಿ ಆಯುಕ್ತರಿಗೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಕಲ್ಯಾಸಿಪಾಳ್ಯ ಠಾಣೆಯ ಸಿಬ್ಬಂದಿಯ ನಿರ್ಲಕ್ಷ್ಯವನ್ನೂ ಉಲ್ಲೇಖಿಸಲಾಗಿತ್ತು.
ಇದೇ ವರದಿಯ ಆಧಾರದಲ್ಲಿ ಇದೀಗ ಇನ್ಸ್ ಪೆಕ್ಟರ್ ಎಂ.ಎಲ್. ಚೇತನ್ ಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಪ್ರಸನ್ನಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅಂದ ಹಾಗೇ ಈ ಕಲಾಸಿಪಾಳ್ಯ ಠಾಣೆಯ ಸಿಬ್ಬಂದಿ ಅಮಾನತುಗೊಳ್ಳುವುದು ಇದು ಮೊದಲಲ್ಲ, 2015ರಲ್ಲಿ ಲಂಚ ಸ್ವೀಕರಿಸಿದ ಕಾರಣಕ್ಕೆ ಮುಖ್ಯ ಪೇದೆ ಅಮಾನತುಗೊಂಡಿದ್ದರು. 2018ರಲ್ಲಿ ಇಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ ಪ್ರಕಾಶ್ ಅನ್ನುವ ಇನ್ಸ್ ಪೆಕ್ಟರ್ ಕರ್ತವ್ಯ ಲೋಪದಿಂದ ಅಮಾನತುಗೊಂಡಿದ್ದರು. 2012ರಲ್ಲಿ ಕರ್ತವ್ಯದ ವೇಳೆ ನಿದ್ದೆ ಮಾಡಿದ ಕಾರಣಕ್ಕೆ ಇದೇ ಠಾಣೆಯ ಪೇದೆಯೊಬ್ಬರು ಅಮಾನತುಗೊಂಡಿದ್ದರು.
Discussion about this post