ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ, ಕಾಯಿರಿ
ಬೆಂಗಳೂರು : ಒಂದಿಷ್ಟು ದಿನಗಳ ಬ್ರೇಕ್ ಪಡೆದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಜಗಳ ಮತ್ತೆ ಶುರುವಾಗಿದೆ. ಈ ನಡುವೆ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಬಳಸಿರುವ ಭಾಷೆ ಹಲವರ ಅಸಮಾಧಾನಕ್ಕೂ ಕಾರಣವಾಗಿದೆ. ಮಾತ್ರವಲ್ಲದೆ ಈ ಭಾಷೆಗಳನ್ನು ಗಮನಿಸಿದ್ರೆ ಕುಮಾರಸ್ವಾಮಿ ಹತಾಶೆಗೆ ಒಳಗಾಗಿರುವಂತೆ ಕಾಣಿಸುತ್ತಿದೆ.
ಈಗಾಗಲೇ ಜೆಡಿಎಸ್ ವಿರುದ್ಧ ಹರಿಹಾಯುತ್ತಿರುವ ಸಿದ್ದರಾಮಯ್ಯ, ಮುಂದುವರಿದ ಭಾಗವಾಗಿ ತುಮಕೂರಿನಿಂದ ಜೆಡಿಎಸ್ ಅನ್ನು ಒದ್ದೋಡಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದರು. ಇದರಿಂದ ವಿಚಲಿತರಾದ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟರ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಯೋಗ್ಯತೆ ಇಲ್ಲ. ಪಕ್ಷ ಕಟ್ಟುವ ಧಂ ಇಲ್ಲ. ಗೆದ್ದಲು ಕಟ್ಟಿದ ಹುತ್ತದಲ್ಲಿ ವಿಷಸರ್ಪದಂತೆ ಹೋಗಿ ಸೇರಿಕೊಳ್ಳುವ, ಕಂಡೋರ ಕಷ್ಟದ ಮೇಲೆ ಅಧಿಕಾರ ಅನುಭವಿಸುವ ಸಿದ್ದರಾಮಯ್ಯ.. ನೀವಾ ಜೆಡಿಎಸ್ ಬಗ್ಗೆ ಮಾತನಾಡುವುದು?
ತುಮಕೂರಿನಿಂದ ಜೆಡಿಎಸ್ʼನ್ನು ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್ʼನ ಪಿತ್ರಾರ್ಜಿತ ಆಸ್ತಿಯಾ? ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ, ಕಾಯಿರಿ.
ಕಾಂಗ್ರೆಸ್ ಸೇರುವ ಮುನ್ನ ನೀವು ಯಾರ ಬಾಲಂಗೋಚಿ ಆಗಿದ್ದಿರಿ? ಗುರುಸ್ವಾಮಿ ಅವರೆದುರು ಸೋತು ಸುಣ್ಣವಾದ ಮೇಲೆ ಅನುಗ್ರಹಕ್ಕೆ ಬಂದು ಯಾರ ಮುಂದೆ ಗಳಗಳನೆ ಅತ್ತು ರಾಜಕೀಯ ಬಿಟ್ಟು, ವಕೀಲಿ ಮಾಡುತ್ತೇನೆ ಎಂದಿರಿ ಅನ್ನುವುದು ನೆನಪಿದೆಯಾ ಸಿದ್ದರಾಮಯ್ಯ? ಆಗ ನಿಮಗೆ ಬಾಲಂಗೋಚಿತನ ನೆನಪಾಗಲಿಲ್ಲವೆ?
ಪ್ರತಿಯೊಂದಕ್ಕೂ ಈ ಸರಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎನ್ನುವ ನಿಮ್ಮ ʼಸುಳ್ಳು ನಾಲಗೆʼ; ಅದೇ ಸರಕಾರ ಬರಲು ಮೂಲ ಕಾರಣರಾದ ʼಸಿದ್ದಪುರುಷʼ ಯಾರು ಎನ್ನುವುದನ್ನು ಹೇಳಲಿಲ್ಲವೇ? ಪಕ್ಷದ್ರೋಹ ತಾಯಿಗೆ ಮಾಡುವ ದ್ರೋಹಕ್ಕೆ ಸಮಾನ. ನಿಮ್ಮ ದ್ರೋಹ ಮುಚ್ಚಿಟ್ಟುಕೊಳ್ಳಲು ಜೆಡಿಎಸ್ ಜಪವಾ ಸಿದ್ದರಾಮಯ್ಯ?
ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವ ದುರಾಸೆ, ಅವಕಾಶ ಸಿಗದೆನ್ನುವ ಅನ್ನುವ ಹತಾಶೆ. ಅಭ್ಯರ್ಥಿಗಳಿಲ್ಲ, ಜೆಡಿಎಸ್ ಬಿಟ್ಟರೆ ಗತಿ ಇಲ್ಲ ನಿಮ್ಮ ಯೋಗ್ಯತೆಗೆ. ನಮ್ಮವರನ್ನು ಹೈಜಾಕ್ ಮಾಡಿ ಅವರಿಗೆ ಟಿಕೆಟ್ ಆಮಿಷ ತೋರಿಸಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ತಳ್ಳುವ ನಿಮ್ಮ ʼಕಂತ್ರಿʼ ರಾಜಕೀಯ ಎಲ್ಲರಿಗೂ ಗೊತ್ತಿದೆ.
ಅಕ್ಕಪಕ್ಕದವರ ತಟ್ಟೆಯಲ್ಲಿರುವುದನ್ನು ಎಗರಿಸುವುದು ಸಿದ್ಧಾಂತವೇ? ʼಆಪರೇಷನ್ ಹಸ್ತʼವೂ ಸಿದ್ಧಾಂತವೇ? ಆಶ್ರಯ ಕೊಟ್ಟ ಪಕ್ಷವನ್ನು, ಅಲ್ಲಿನ ಮೂಲನಿವಾಸಿಗಳನ್ನು ಮುಗಿಸುವುದೇ ಸಿದ್ಧಾಂತವೇ?
ನೀವು ಜೆಡಿಎಸ್ ಸಿದ್ಧಾಂತದ ಬಗ್ಗೆ ಮಾತನಾಡುತ್ತೀರಿ? ನಾಚಿಕೆಯಾಗಬೇಕು ನಿಮಗೆ. ಸುಳ್ಳು ನಿಮ್ಮ ರಾಜಕೀಯದ ಅಡಿಪಾಯ. ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಸುಳ್ಳೇ ನಿಮ್ಮ ನರಿಬುದ್ಧಿ ಅವಕಾಶವಾದಿ ರಾಜಕಾರಣ ನಿಜಸ್ವರೂಪ ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ. ಇದಕ್ಕೆ #ವಿನಾಶಕಾಲೇ_ವಿಪರೀತ_ಸುಳ್ಳು ಅನ್ನುವ ಹ್ಯಾಷ್ ಟ್ಯಾಗ್ ಕೊಟ್ಟಿದ್ದಾರೆ.
ಈ ನಡುವೆ ಕುಮಾರಸ್ವಾಮಿ ಟ್ವೀಟ್ ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ಬಳಸಿರುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಚುನಾವಣೆಯಲ್ಲಿ ನಾನು ಸೋತ್ತಿದ್ದೇನೆ. ಯಾಕೆ ಕುಮಾರಸ್ವಾಮಿ ಸೋತಿಲ್ವಾ, ಅವರಪ್ಪ ಸೋತಿಲ್ಲಾ, ಮಗ ಸೋತಿಲ್ವಾ ಎಂದು ತಿರುಗೇಟು ನೀಡಿದರು. ನಾನು ಕುಮಾರಸ್ವಾಮಿ ಹೇಳಿಕೆಗಳಿಗೆಲ್ಲಾ ಪ್ರತಿಕ್ರಿಯೆಸೋದಿಕ್ಕೆ ಹೋಗೋದಿಲ್ಲ ಅಂದಿದ್ದಾರೆ. ನನ್ನ ಕಂಡ್ರೆ ಅವರಿಗೆ ಭಯ, ಹೀಗಾಗಿ ಹೀಗೆ ಹೇಳಿಕೆ ಕೊಡುತ್ತಿದ್ದಾರೆ. ನನ್ನ ವಿರುದ್ಧ ಮಾತನಾಡಿದ್ರೆ ರಾಜಕೀಯ ಲಾಭ ಪಡೆಯಬಹುದು ಅನ್ನುವುದು ಅವರ ಉದ್ದೇಶ ಎಂದು ಅನ್ನಭಾಗ್ಯ ಖ್ಯಾತಿಯ ಸಿದ್ದರಾಮಯ್ಯ ಹೇಳಿದ್ದಾರೆ.
Discussion about this post