ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರು ಕೆಳಗಿಳಿದ್ರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆ ಶಿವಕುಮಾರ್ ಕೂಡಾ ಕೆಳಗಿಳಿಯಬೇಕಾಗುತ್ತದೆ, ಇಂತಹುದೊಂದು ಸುದ್ದಿ ಕರ್ನಾಟಕ ರಾಜಕೀಯದ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಅರೇ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಅದ್ಯಾಕೆ ಕೆಳಗಿಳಿಯಬೇಕು ಅನ್ನುವ ಪ್ರಶ್ನೆ ಖಂಡಿತಾ ಕಾಡುತ್ತದೆ. ಈ ಎರಡೂ ಘಟನೆಗಳಿಗೂ ಅದೇನು ಸಂಬಂಧ ಅನ್ನುವುದು ಎಲ್ಲರ ಪ್ರಶ್ನೆ. ಆದರೆ ಇದಕ್ಕೆ ಸಂಬಂಧ ಕಲ್ಪಿಸಿದ ಹಿರಿಮೆ ಸಿದ್ದರಾಮಯ್ಯ ಬಣದ್ದು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ್ರೆ ಲಿಂಗಾಯತರು ಬಿಜೆಪಿ ಮೇಲೆ ಮುನಿಸಿಕೊಳ್ಳುತ್ತಾರೆ. ಆಗ ಅದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಬಹುದು. ಲಾಭ ಪಡೆದುಕೊಳ್ಳಬೇಕಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಲಿಂಗಾಯಿತರೊಬ್ಬರಿರಬೇಕು ಅವನ್ನುವುದು ಸಿದ್ದರಾಮಯ್ಯ ಬಣದ ಸಲಹೆ.
ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಉದುರಿಸುವುದು ಅವರ ಉದ್ದೇಶ. ತಮ್ಮ ಸಲಹೆಗೆ ಹೈಕಮಾಂಡ್ ಅಸ್ತು ಅಂದ್ರೆ, ಸಿದ್ದರಾಮಯ್ಯ ಅವರ ಸಿಎಂ ಕುರ್ಚಿಯ ಕಡೆಗಿನ ನಡೆಗೆ ಅಡ್ಡಿಯಾಗಿರುವ ಡಿಕೆಶಿಯವರನ್ನು ಸೈಡಿಗೆ ಸರಿಸಿದಂತಾಗುತ್ತದೆ. ಜೊತೆಗೆ ಸಿದ್ದರಾಮಯ್ಯ ಬಣದ ಲಿಂಗಾಯಿತರೊಬ್ಬರು ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ.
ಇದೇ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್, ಯಡಿಯೂರಪ್ಪ ಲಿಂಗಾಯಿತ ಅನ್ನುವ ಮಾತನ್ನು ಪದೇ ಪದೇ ಒತ್ತಿ ಹೇಳುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಬಿಜೆಪಿ ಲಿಂಗಾಯತರ ಅವಕೃಪೆಗೆ ತುತ್ತಾಗಲಿದೆ ಅನ್ನುವ ಎಂಬಿ ಪಾಟೀಲ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ವಿರೇಂದ್ರ ಪಾಟೀಲರನ್ನು ಸಿಎಂ ಸ್ಥಾನದಿಂದ ಬದಲಾಯಿಸಿ, ಲಿಂಗಾಯತರಿಗೆ ಕಾಂಗ್ರೆಸ್ ದ್ರೋಹ ಬಗೆದಿರುವುದು ಮರೆತು ಹೋಯ್ತೇ ಎಂದು ಕಿಡಿ ಕಾರಿದೆ.
Discussion about this post