ಬಿಹಾರಕ್ಕೆ ನೆರವು ಕರ್ನಾಟಕಕ್ಕೆ ಮರೆವು ಇದು ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಳಿ ಬರುತ್ತಿರುವ ಆಕ್ರೋಶದ ನುಡಿ. ಕರ್ನಾಟಕ ನೆರೆ ಹಾವಳಿಯಿಂದ ತತ್ತರಿಸಿದೆ. ಆದರೆ ಕೇಂದ್ರದಿಂದ ಬರಬೇಕಾಗಿದ್ದ ನೆರವು ಮಾತ್ರ ಇನ್ನೂ ಬಂದಿಲ್ಲ.
ಇನ್ನು ಪರಿಹಾರ ಹಣ ತರಬೇಕಾಗಿದ್ದ 25 ಸಂಸದರು ಮೋದಿ ಮುಂದೆ ನಿಂತು ಮಾತನಾಡುವ ತಾಕತ್ತಿಲ್ಲದ ಕಾರಣದಿಂದ ನೆರವು ಬಿಡುಗಡೆಯಲ್ಲಿ ವಿಳಂಭವಾಗುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತನಾಡುವ ಧೈರ್ಯ ಹೊಂದಿದ್ದರೆ ಉತ್ತರ ಕರ್ನಾಟಕದ ಮಂದಿಯ ಸಂಕಷ್ಟ ಪರಿಹರಿಸಲು ಒಂದಿಷ್ಟು ಪರಿಹಾರ ಹಣ ಸಿಗುತ್ತಿತ್ತು.
ಆದರೆ ಅಲ್ಲಿ ಮಾತನಾಡಲಾಗದ ಮಂದಿ, ಇಲ್ಲಿ ನ್ಯಾಯಯುತವಾಗಿ ಬೇಡಿಕೆ ಇಟ್ಟವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಈ ಸಂಸದರ ವಿರುದ್ಧ ಇದೀಗ ಕರ್ನಾಟಕ ಜನ ಆಕ್ರೋಶ ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಾಡಿಸಲಾರಂಭಿಸಿದ್ದಾರೆ. ಇದರ ಬಿಸಿ ಮುಟ್ಟುತ್ತಿದ್ದಂತೆ ಮಾತನಾಡಿರುವ ಸಚಿವ ಸದಾನಂದಗೌಡ ಗುರುವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ನೆರೆ ಪರಿಹಾರ ವಿಚಾರ ಎತ್ತುವುದಾಗಿ ಹೇಳಿದರು.
ನೆರೆ ಅಧ್ಯಯನ ತಂಡ ಇಂದು ಅಥವಾ ನಾಳೆ ಕೇಂದ್ರಕ್ಕೆ ಪ್ರವಾಹ ಪರಿಸ್ಥಿತಿಯಿಂದಾದ ಹಾನಿ ಕುರಿತು ವರದಿ ಸಲ್ಲಿಸಲಿದೆ. ಆದಷ್ಟು ಶೀಘ್ರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂತ್ರಸ್ತರ ರಕ್ಷಣೆಗೆ ಕೈಗೊಳ್ಳಬೇಕಾದ ತುರ್ತುಕ್ರಮಗಳನ್ನು ಈಗಾಗಲೇ ಸರ್ಕಾರ ತೆಗೆದುಕೊಂಡಿದೆ. ನೆರೆ ಸಂತ್ರಸ್ತರಿಗೆ ನೆರವು ಒದಗಿಸಲು ಜಿಲ್ಲಾಧಿಕಾರಿಗಳ ಹಾಗೂ ಪಿಡಿ ಖಾತೆಗಳಲ್ಲಿ ಇದಕ್ಕಾಗಿ ಹಣ ಮೀಸಲಿಡಲಾಗಿದೆ. ಡಿಸೆಂಬರ್ ನಲ್ಲಿ ಬಿಡುಗಡೆಗೊಳಿಸಬೇಕಾಗಿದ್ದ ಎಸ್ ಡಿಆರ್ ಎಫ್ ಅನುದಾನವನ್ನು ಕೇಂದ್ರ ಈಗಾಗಲೇ ಮುಂಚಿತವಾಗಿ ರಾಜ್ಯಕ್ಕೆ ನೀಡಿದೆ ಎಂದು ಕೇಂದ್ರದ ನಡೆಯನ್ನು ಸಮರ್ಥಿಸಿಕೊಂಡಿರುವ ಸದಾನಂದಗೌಡ ಹಣ ದುರುಪಯೋಗ ಆಗಬಾರದೆಂಬ ಉದ್ದೇಶ ಕೇಂದ್ರದ್ದು, ಇನ್ನೂ ಮಳೆ ನಿಂತಿಲ್ಲ. ಮಳೆ ನಿಂತ ಬಳಿಕ ನೆರೆ ಹಾನಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ತರಾತುರಿಯಲ್ಲಿ ಯಾವ ನಿರ್ಧಾರವನ್ನೂ ಕೈಗೊಳ್ಳಲು ಸಾಧ್ಯವಿಲ್ಲ ಅಂದಿದ್ದಾರೆ.
ಮಳೆ ನಿಂತ ಬಳಿಕ ಪರಿಹಾರ ಕೊಟ್ಟರೆ ಈಗಾಗಲೇ ಅರೆ ಜೀವವಾಗಿರುವ ಮಂದಿ ಸತ್ತು ಹೋಗಿರುತ್ತಾರೆ. ಸದಾನಂದಗೌಡರ ಮಾತು ಕೇಳಿದ್ರೆ ನಗು ಬರುತ್ತದೆ. ಕರ್ನಾಟಕ ಪೂರ್ತಿ ಮೊತ್ತದಲ್ಲಿ ಪರಿಹಾರ ಹಣ ಕೇಳುತ್ತಿಲ್ಲ ಒಂದೆರೆಡು ಕಂತುಗಳನ್ನು ಕೊಡಿ ಅನ್ನುವುದು ನಮ್ಮ ಬೇಡಿಕೆ. ತುರ್ತು ಕಾಮಗಾರಿ ಮತ್ತು ಕ್ರಮಗಳನ್ನು ಕೈಗೊಳ್ಳಲು ಹಣ ಬೇಕಾಗಿದೆ. ತುರ್ತು ಪರಿಹಾರ ಕಾರ್ಯಾಚರಣೆಗೂ ಕೇಂದ್ರ ಅಧ್ಯಯನ ತಂಡದ ವರದಿಯನ್ನು ಮೋದಿ ನೆಚ್ಚಿಕೊಂಡಿದ್ದಾರೆ ಅಂದರೆ ದುರಂತವೇ ಸರಿ. ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಅಧ್ಯಯನ ತಂಡದ ವರದಿ ಬೇಕು ಅನ್ನುವುದರಲ್ಲಿ ಅರ್ಥವಿದೆ.
25 ಮಂದಿ ಒಂದು ಸಲ ಜೊತೆಯಾಗಿ ಹೋಗಿ, ಕರ್ನಾಟಕದಲ್ಲಿ ಜನ ನಮ್ಮನ್ನು ಹಿಗ್ಗಾ ಮುಗ್ಗಾ ಜಾಡಿಸುತ್ತಿದ್ದಾರೆ. ಅಲ್ಲಿ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ, ಕಾಸು ಬಿಡುಗಡೆ ಮಾಡಿ ಇಲ್ಲವೇ ರಾಜೀನಾಮೆ ಪತ್ರ ತೆಗೆದುಕೊಳ್ಳಿ ಎಂದು ಮೋದಿಯವರಿಗೆ ಹೇಳಿ. ಪರಿಹಾರ ಕಾರ್ಯಾಚರಣೆಗೆ ಕಾಸು ಬರದಿದ್ದರೆ ಹೇಳಿ.
Discussion about this post