ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಅತೀ ಹೆಚ್ಚು ವಿವಾದಕ್ಕೆ ಗುರಿಯಾಗಿರುವ ಸಚಿವ ಸಾರಾ ಮಹೇಶ್ ಚಂದನವನದ ನಟಿಯೊಬ್ಬರನ್ನು ಕೆಣಕಿ ಮತ್ತೆ ಸುದ್ದಿಯಲ್ಲಿದ್ದಾರೆ.
ತನ್ನೂರಿನ ಜನರ ಬಗ್ಗೆ ಆತಂಕದಿಂದ ಪ್ರಶ್ನಿಸಿದ ನಟಿಗೆ ಸೂಕ್ತ ಉತ್ತರ ನೀಡಬೇಕಾದ ಸಚಿವರು ಉಡಾಫೆಯಾಗಿ ಉತ್ತರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಶನಿವಾರ ಮೈಸೂರಿನಲ್ಲಿ ಮಾತನಾಡಿದ್ದ ನಟಿ ಹರ್ಷಿಕಾ ಪೂಣಚ್ಚ, ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ.ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿ ನೋಡಿದೆ. ಅದು ಚೆನ್ನಾಗಿಲ್ಲ. ಸಂತ್ರಸ್ಥರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದರು.
ಪ್ರವಾಹದ ಬಳಿಕ ರಾಜ್ಯ ಸರ್ಕಾರ ಶೀಘ್ರ ಮನೆ ವಿತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಮನೆ ಹಂಚಿಕೆಯಾಗಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಹರ್ಷಿಕಾ ಎತ್ತಿರುವ ಪ್ರಶ್ನೆ ಸರಿಯಾಗಿಯೇ ಇತ್ತು. ಆದರೆ ಇದರಿಂದ ಕೆರಳಿದ್ದು ಮಾತ್ರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್.
ಮನೆಗಳ ಗುಣಮಟ್ಟದ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಎತ್ತಿರುವ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸುವ ಬದಲು, ಯಾರವರು? ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ?. ಅವರೇನು ಸಿನಿಮಾ ನಟಿನಾ? ಸಿನಿಮಾ ನಟಿಯಾದರೆ ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಕಿಡಿ ಕಾರಿದ್ದಾರೆ.
ಮಾನ್ಯ ಸಚಿವರೇ ಸಿನಿಮಾ ನಟಿಯಾದ ತಕ್ಷಣ ಸಿನಿಮಾ ಬಗ್ಗೆ ಮಾತ್ರ ಯಾಕೆ ಮಾತನಾಡಬೇಕು. ದೇಶದ ಪ್ರತಿಯೊಬ್ಬ ಪ್ರಜೆಗೂ ಮಾತನಾಡುವ ಹಕ್ಕಿದೆ. ಅವರು ಇದೇ ವಿಷಯದ ಬಗ್ಗೆ ಮಾತನಾಡಬೇಕು ಎಂದು ನಿರ್ಬಂಧಿಸುವ ಹಕ್ಕು ಜನಪ್ರತಿನಿಧಿಗಳಿಗೆ ಇಲ್ಲ. ಹರ್ಷಿಕಾ ತನ್ನೂರಿನ ಜನರ ಬಗ್ಗೆ ಕಾಳಜಿ ತೋರಿದ್ದಾರೆ. ಮನೆ ಕಳಪೆಯಾಗಿದೆ ಎಂದು ದೂರಿದ್ದಾರೆ.
ಮನೆ ಕಳಪೆಯಾಗಿಲ್ಲ ಎಂದು ಸಾಬೀತು ಮಾಡುವ ಜವಾಬ್ದಾರಿ ಉಸ್ತುವಾರಿ ಸಚಿವರಾದ ನಿಮ್ಮದು. ನಿಮ್ಮ ಅಧಿಕಾರಿಗಳನ್ನು ಹರ್ಷಿಕಾ ಅವರ ಜೊತೆ ಕಳುಹಿಸಿ ಅದು ಹೇಗೆ ಮನೆ ಕಳಪೆ ಅಂದಿದ್ದೀರಿ ಅನ್ನುವುದನ್ನು ಕೇಳಿ. ಇಲ್ಲವೇ ಸರ್ಕಾರ ನಿರ್ಮಿಸಿಕೊಟ್ಟ ಮನೆಗಳು ಕಳಪೆಯಾಗಿಲ್ಲ ಅನ್ನುವುದನ್ನು ಸಾಬೀತು ಮಾಡಿ. ಅದನ್ನು ಬಿಟ್ಟು ವಿದ್ಯಾಭ್ಯಾಸ ಹಿನ್ನೆಲೆ, ಸಿನಿಮಾ ನಟಿಯಾದರೆ ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು ಅನ್ನುವುದೆಲ್ಲಾ ಉಡಾಫೆಯ ಉತ್ತರವಾಗುತ್ತದೆ.
ಒಬ್ಬ ಜವಾಬ್ದಾರಿಯುತ ಸಚಿವರಾಗಿ ಸಂಕಷ್ಟದಲ್ಲಿರುವ ಮಂದಿಗೆ ಸಾಂತ್ವಾನ ಹೇಳುವುದು ನಿಮ್ಮ ಕರ್ತವ್ಯ.
ಹಾಗೇ ನೋಡಿದ್ರೆ ನಿರ್ಮಲಾ ಸೀತರಾಮನ್ ಬಂದಾಗ ಏನಾಯ್ತು, ಕಾರು ತಡೆ ಪೊಲೀಸ್ ಪೇದೆ ಕಥೆ ಎನಾಯ್ತು ಹೀಗೆ ಸಾಲು ಸಾಲು ಕಥೆಗಳನ್ನು ಮರೆಯಲು ಸಾಧ್ಯವೇ.
ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ನಿಂದ ಸಚಿವರಾದವರ ಕಥೆಯೇ ಹೀಗೆ ಅನ್ನಿಸುತ್ತದೆ, ಮೊನ್ನೆ ಮೊನ್ನೆ ಡಿಸಿ ತಮ್ಮಣ್ಣ ಗ್ರಾಮಸ್ಥರ ಮೇಲೆ ಕೋಪ ಮಾಡಿಕೊಂಡಿದ್ರು. ಅದಕ್ಕಿಂತ ಮುಂಚೆ ಸುಮಲತಾ ವಿಷಯದಲ್ಲಿ ರೇವಣ್ಣ ಏನೇನೋ ಮಾತನಾಡಿದ್ರು.
Discussion about this post