ರಾಜ್ಯ ಪೊಲೀಸರ ಬಹು ದಿನದ ಬೇಡಿಕೆಯೊಂದು ಈಡೇರಿದೆ. ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲೇ ಜಾರಿಯಾಗಬೇಕಾಗಿದ್ದ ಪೊಲೀಸರ ಸಂಬಳ ಏರಿಕೆಗೆ ಯಡಿಯೂರಪ್ಪ ಸರ್ಕಾರ ಹಸಿರು ನಿಶಾನೆ ತೋರಿದೆ.
ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಪೊಲೀಸ್ ಇಲಾಖೆಯ ಕೆಲವೊಂದು ವರ್ಗದ ಹುದ್ದೆಗಳ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಲಾಗಿದ್ದು, ಪರಿಷ್ಕೃತ ವೇತನ ಆಗಸ್ಟ್ ಒಂದರಿಂದಲೇ ಅನ್ವಯವಾಗಲಿದೆ.
ಪರಿಷ್ಕೃತ ವೇತನವನ್ನು ಈ ತಿಂಗಳ ಸಂಬಳದೊಂದಿಗೆ ನೀಡಲು ಆದೇಶದಲ್ಲಿ ಸೂಚಿಸಲಾಗಿದ್ದು, ರಾಜ್ಯ ಪೊಲೀಸ್ ಇಲಾಖೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಸಂಬಳ ಏರಿಕೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪೊಲೀಸರ ನಿರೀಕ್ಷೆ ಸುಳ್ಳಾಗಿತ್ತು. ಬಳಿಕ ಬಂದ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಬಗ್ಗೆ ಮಾತೇ ಆಡಿರಲಿಲ್ಲ. ಹೀಗಾಗಿ ಸಂಬಳ ಏರಿಕೆ ಅನ್ನುವುದು ಪೊಲೀಸರ ಪಾಲಿಗೆ ಗಗನ ಕುಸುಮ ಅನ್ನುವ ಮಾತು ಕೇಳಿ ಬಂದಿತ್ತು.
ಆದರೆ ಇದೀಗ ಹಲವು ವರ್ಷದಿಂದ ಕಾಯುತ್ತಿದ್ದ ಘಳಿಗೆ ಬಂದಿದ್ದು ಸಂಭ್ರಮವೇ ಸರಿ.
ಈ ಸಂಬಂಧ ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ , ನಾಡಹಬ್ಬ ದಸರಾ ವೇಳೆಗೆ ಔರಾದ್ಕರ್ ಸಮಿತಿ ವರದಿ ಅನುಷ್ಠಾನಗೊಳಿಸಿರುವ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಹಬ್ಬದ ವೇಳೆಗೆ ಔರಾದ್ಕರ್ ಸಮಿತಿ ವರದಿ ಅನುಷ್ಠಾನ ಮಾಡಲು ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ನಾಡ ಹಬ್ಬದ ವೇಳೆಗೆ ಪೊಲೀಸರಿಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂದಿದ್ದರು.
ಔರಾದ್ಕರ್ ಸಮಿತಿ ವರದಿ ಅನುಷ್ಠಾನದಿಂದಾಗಿ ಪೇದೆಯಿಂದ ಹಿಡಿದು ಡಿವೈಎಸ್ಪಿವರೆಗೆ ಔರಾದ್ಕರ್ ವರದಿಯಂತೆ ವೇತನ ಪರಿಷ್ಕರಣೆಯಾಗಲಿದೆ. ಜೊತೆಗೆ ಕಾರಾಗೃಹ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಯ ವೇತನ ಪರಿಷ್ಕರಿಸುವ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಅವರಿಗೂ ಔರಾದ್ಕರ್ ವರದಿಯಂತೆ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
Discussion about this post