ಆಯುಷ್ಮಾನ್ ಭಾರತ ಯೋಜನೆಯು ಅತ್ಯುತ್ತಮ ಸಾಮಾಜಿಕ ಸುರಕ್ಷತಾ ಕಾರ್ಯಕ್ರಮ
ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ವೇಳೆ ಅವರು, ಭಾರತ ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ ಯೋಜನೆಯು ಅತ್ಯುತ್ತಮ ಸಾಮಾಜಿಕ ಸುರಕ್ಷತಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ನಾಗರಿಕರಿಗೆ ಆರೋಗ್ಯದ ವಿಮೆ ಒದಗಿಸುವ ಯೋಜನೆ ಅಡಿಯಲ್ಲಿ ಇದುವರೆಗೆ 6 ಕೋಟಿಗೂ ಅಧಿಕ ಮಂದಿ ದೇಶಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಇಳಿಸಿದರು.
ಆಯುಷ್ಮಾನ್ ಭಾರತ ಯೋಜನೆಯು 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯರಿಗೆ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಸ್ಥಿತಿ ಮತ್ತು ವ್ಯಕ್ತಿಯ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲರಿಗೂ ಈ ಯೋಜನೆ ಲಭ್ಯವಿದೆ ಎಂದು ಹೇಳಿದರು.
ಭಾರತೀಯ ನಾಗರಿಕರಿಗೆ ದೊರೆತಿರುವ ಡಿಜಿಟಲ್ ಸೌಲಭ್ಯ ಅತ್ಯಂತ ಶಕ್ತಿದಾಯಕ ಸಾಧನವಾಗಿದೆ. ಡಿಜಿಟಲ್ ಮೂಲಸೌಕರ್ಯವನ್ನು ಜನ ಬಳಕೆ ಮಾಡದೇ ಹೋಗಿದ್ದರೆ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯನ್ನು ಹೊಂದಲು ಸಾಧ್ಯವಾಗುತ್ತಿರಲಿಲ್ಲ.
ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದ್ದು, ಯಾವುದೇ ರೀತಿಯ ಹಣಕಾಸು ಅಕ್ರಮಕ್ಕೆ ತಡೆ ಹಾಕಿದೆ ಎಂದು ತಿಳಿಸಿದರು.
ಮೂಲಸೌಕರ್ಯ, ಹೂಡಿಕೆ, ಅನ್ವೇಷಣೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಆರ್ಥಿಕತೆಯ ಮೂಲಕ ಭಾರತ 2047ರೊಳಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿ ಹೊಂದಿದೆ ಎಂದು ತಿಳಿಸಿದರು.