ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು.
ರಾಘವೇಂದ್ರ ಮಠದಲ್ಲಿ ನಡೆಯುತ್ತಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹಲವರು ಅವರೊಂದಿಗೆ ಸಾಥ್ ನೀಡಿದ್ದರು.
ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಮತ್ಯಾವುದೇ ಮಾಜಿ ಸಿಎಂ ದೇವಸ್ಥಾನಕ್ಕೆ ಹೋಗಿರುತ್ತಿದ್ರೆ ಸುದ್ದಿಯಾಗುತ್ತಿರಲಿಲ್ಲ.
ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ಭೇಟಿ ಕೊಟ್ಟ ಕಾರಣ ಈ ಸುದ್ದಿಗೆ ಮಹತ್ವ ಬಂದಿದೆ.
ಸಿದ್ದರಾಮಯ್ಯ ಸಾವಿರ ಸಲ ಹೇಳಿದ್ದಾರೆ, ನಾನು ನಾಸ್ತಿಕನಲ್ಲ ಆಸ್ತಿಕ ಎಂದು. ಆದರೆ ಸಿದ್ದರಾಮಯ್ಯ ಮಾತನ್ನು ನಂಬಲು ಜನ ಸಿದ್ದರಿಲ್ಲ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರ ಹೇಳಿಕೆಗಳು.
ದೇವರು, ಬಹುಸಂಖ್ಯಾತರ ನಂಬಿಕೆಗಳ ಕುರಿತಂತೆ ಸಿದ್ದರಾಮಯ್ಯ ಕೊಟ್ಟಿರುವ ಹೇಳಿಕೆಗಳೇ ಇದಕ್ಕೆ ಕಾರಣ.
ಜೊತೆಗೆ ದೇವರು, ದೇವಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸುದ್ದಿಗಳನ್ನು ಹರಿಬಿಟ್ಟ ಸಂದರ್ಭದಲ್ಲಿ ಅದನ್ನು ಎದುರಿಸಲು ಸಿದ್ದರಾಮಯ್ಯ ವಿಫಲರಾಗಿದ್ದು ಮತ್ತು ಕಾಂಗ್ರೆಸ್ ನಾಯಕರು ಅದಕ್ಕೆ ತಿರುಗೇಟು ಕೊಡಲು ವಿಫಲರಾಗಿದ್ದು ಇದಕ್ಕೆ ಕಾರಣ.
ಇನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಬಹುಸಂಖ್ಯಾತರ ಭಾವನೆಗೆ ಬೆಲೆ ಕೊಡುತ್ತಲೆ ಇರಲಿಲ್ಲ. ಇದೀಗ ಸಿದ್ದರಾಮಯ್ಯ ಅವರಿಗೆ ನಾನ್ಯಾಕೆ ಮಾಜಿಯಾದೆ ಅನ್ನುವುದರ ಅರಿವಾಗಿದೆ. ಹೀಗಾಗಿ ಮುಂದಿನ ಸಲ ಸಿಎಂ ಆಗಲೇಬೇಕು ಎಂದು ಪಣ ತೊಟ್ಟಿದ್ದಾರೆ ಅನ್ನುವುದು ರಾಯರ ಮಠದ ಭೇಟಿಯಿಂದ ಸ್ಪಷ್ಟವಾಗಿದೆ.
ಜೊತೆಗೆ ಅಲ್ಲಿ ಅವರು ಆಡಿರುವ ಮಾತುಗಳು ಕೂಡಾ.
ನಾನು ದೇವರನ್ನು ನಂಬಿದ್ದೇನೆ, ದೇವರೊಬ್ಬ ನಾಮ ಹಲವು ಅಂದುಕೊಂಡಿದ್ದೇನೆ. ದೇವರು ಎಲ್ಲರಲ್ಲೂ ಇದ್ದಾನೆ.
ದೇವರ ಅನುಗ್ರಹ ಪಡೆಯಲು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ. ದೇವಸ್ಥಾನಕ್ಕೆ ಹೋದವೆರೆಲ್ಲ ಆಸ್ತಿಕರಲ್ಲ, ದೇವಸ್ಥಾನಕ್ಕೆ ಹೋಗಲಿಲ್ಲ ಅಂದ ಮಾತ್ರಕ್ಕೆ ನಾಸ್ತಿಕರಲ್ಲ ಅಂದಿದ್ದಾರೆ.
ನನ್ನ ಪುತ್ರ ಹಾಗೂ ಪತ್ನಿ ನಿತ್ಯ ದೇವರಿಗೆ ಪೂಜೆ ಮಾಡುತ್ತಾರೆ. ಮಾತ್ರವಲ್ಲದೆ ವಾರಕ್ಕೊಮ್ಮೆ ಉಪವಾಸ ಮಾಡುತ್ತಾರೆ. ನಾನು ದೇವರ ಮನೆ ಕಡೆ ಹೋಗುವುದಿಲ್ಲ. ಹಾಗಂತ ನಾನು ದೇವರ ವಿರೋಧಿಯಲ್ಲ, ದೇವರ ಮೇಲೆ ನಂಬಿಕೆ ಇದೆ ಅಂದಿದ್ದಾರೆ.
Discussion about this post