ಡಿವಿ ಸದಾನಂದಗೌಡ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಪುತ್ತೂರಿನ ಮಾಜಿ ಶಾಸಕರು, ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದರು, ಪ್ರಸ್ತುತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಮೋದಿ ಸಂಪುಟದಲ್ಲಿ ಸಚಿವರು.
ಇಷ್ಟೆಲ್ಲಾ ವಿವರಣೆಗಳಿಗೆ ಕಾರಣವಿದೆ. ರಾಜಕೀಯ ಬೆಳವಣಿಗೆಗೆ ಸಹಕಾರ ಕೊಟ್ಟ ಕರಾವಳಿಯಿಂದ ಪಲಾಯನ ಮಾಡಿದ ರಾಜಕಾರಣಿ ಅನ್ನುವ ಕಾರಣಕ್ಕೆ ಹೀಗೆ ಅವರನ್ನು ಪರಿಚಯಿಸಬೇಕಾಯ್ತು.
ಬಯಸದೆ ಬಂದ ಭಾಗ್ಯ ಅನ್ನುವಂತೆ ಮುಖ್ಯಮಂತ್ರಿಯಾದ ಡಿವಿಎಸ್ ಆ ಸಂದರ್ಭದಲ್ಲಿ ಕರಾವಳಿಯ ಅಭಿವೃದ್ಧಿಗೆ ಶ್ರಮಿಸಬಹುದಿತ್ತು. ಆದರೆ ಆ ವೇಳೆ ಕರಾವಳಿಯ ನಿರೀಕ್ಷೆಗಳಿಗೆ ತಣ್ಣೀರು ಎರಚಿದರು. ಅದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಯ್ತು. ಹೀಗಾಗಿ ಇನ್ನು ಕರಾವಳಿಯಲ್ಲಿ ರಾಜಕೀಯ ನೆಲೆಯಿಲ್ಲ ಅನ್ನುವುದನ್ನು ಅರಿತ ಸದಾನಂದಗೌಡರು ಕರಾವಳಿಗೆ ಬೆನ್ನು ಹಾಕಿ ಬೆಂಗಳೂರಿನಲ್ಲಿ ರಾಜಕೀಯ ನೆಲೆ ಕಂಡುಕೊಂಡರು. ಹೀಗಾಗಿ ಅವರನ್ನು ಪಲಾಯನವಾದಿ ಎಂದೇ ಕರಾವಳಿ ಜನ ಕರೆಯುತ್ತಾರೆ.
ಇನ್ನು ನೇತ್ರಾವತಿ ತಿರುವು ಯೋಜನೆಯಲ್ಲಿ ಕರಾವಳಿಗೆ ಅನ್ಯಾಯ ಮಾಡಿದ್ದಾರೆ ಅನ್ನುವ ಆರೋಪ ಕೂಡಾ ಅವರ ಮೇಲಿದೆ.
ಈ ನಡುವೆ ಸದಾನಂದಗೌಡರು ಇದೀಗ ಸುದ್ದಿಯಲ್ಲಿರುವುದು ಮತ್ತೊಮ್ಮೆ ಪಲಾಯನವಾಗುವ ಮೂಲಕ.
ನೆರೆ ಪರಿಹಾರಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ನೆರವು ಬಂದಿಲ್ಲ ಎಂದು ಬಿಜೆಪಿ ಸಂಸದರ ವಿರುದ್ಧ ತಿರುಗಿ ಬಿದ್ದಿರುವ ಚಕ್ರವರ್ತಿ ಸೂಲಿಬೆಲೆ ಸದಾನಂದಗೌಡರನ್ನು ನ್ಯಾಯಯುತ ಮಾರ್ಗದಲ್ಲೇ ಪ್ರಶ್ನಿಸಿದ್ದರು.
ಆದರೆ ಇದರಿಂದ ಇರಿಸು ಮುರಿಸುಗೊಂಡ ಸದಾನಂದಗೌಡರು ಆಡಬಾರದ ಮಾತು ಆಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಚಕ್ರವರ್ತಿ ಸೂಲೆಬೆಲೆ ಅವರನ್ನು ಟ್ವೀಟರ್ ನಲ್ಲೇ ಬ್ಲಾಕ್ ಮಾಡಿ ಬಿಟ್ಟಿದ್ದಾರೆ ಸಚಿವ ಸದಾನಂದಗೌಡರು.
ಅತ್ತ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳಿಂದ ನನಗೆ ಜನರ ಸಮಸ್ಯೆಗಳು ಅರ್ಥವಾಗುತ್ತಿದೆ ಅನ್ನುತ್ತಾರೆ. ಆದರೆ ಅವರ ಸಂಪುಟದ ಸಚಿವರೊಬ್ಬರು ಸಮಸ್ಯೆ ಅರಿಯಲು ಬೇಕಾದ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆ ಹೇಳಿದವರನ್ನೇ ಬ್ಲಾಕ್ ಮಾಡುತ್ತಾರೆ.
ಯಾರಾದ್ರೂ ಮೋದಿಯವರಿಗೆ ಟ್ವೀಟ್ ಮಾಡಿ ಸದಾನಂದ ಗೌಡ ಬ್ಲಾಕ್ ಕಥೆಯನ್ನು ಹೇಳಿದ್ರೆ ಚೆನ್ನಾಗಿತ್ತು.
Discussion about this post