ಉಪಚುನಾವಣೆ ಸೋಲಿನ ನಂತ್ರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕವಾಗೋದು ಖಚಿತವಾಗಿದೆ. ಈಗಾಗಲೇ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿರುವ ಕಾರಣದಿಂದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ಡೆಲ್ಲಿ ಮಟ್ಟದಲ್ಲಿ ಲಾಬಿ ಪ್ರಾರಂಭಿಸಿದ್ದಾರೆ.
ಆದರೆ ಸಿದ್ದರಾಮಯ್ಯ ಬಣ ಮಾತ್ರ, ನಮ್ಮದೇ ಬಳಗದ ಸದಸ್ಯರಿಗೆ ಕೆಪಿಸಿಸಿ ಹುದ್ದೆ ಸಿಗಬೇಕು ಎಂದು ಪಣತೊಟ್ಟಿದೆ. ಹೀಗಾಗಿ ದಿನೇಶ್ ಸ್ಥಾನಕ್ಕೆ ಒಕ್ಕಲಿಗರ ಕೋಟದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾದರೆ ಕೃಷ್ಣಬೈರೇಗೌಡ ಅವರಿಗಿರಲಿ. ಲಿಂಗಾಯತರ ಕೋಟ ಪರಿಗಣಿಸುವುದಾದರೆ ಎಂ.ಬಿ.ಪಾಟೀಲ್ ಇರಲಿ ಎನ್ನುವುದು ಸಿದ್ದರಾಮಯ್ಯ ಬಣದ ವಾದ.
ಮತ್ತೊಂದು ಕಡೆ ಮೂಲ ಕಾಂಗ್ರೆಸ್ ನಾಯಕರ ಬಣ ಲಿಂಗಾಯತರ ಕೋಟದಲ್ಲಿ ಈಶ್ವರ್ ಖಂಡ್ರೆ ಅಥವಾ ದಲಿತರ ಕೋಟದಲ್ಲಿ ಕೆ.ಹೆಚ್.ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಹೆಸರು ತೇಲಿ ಬಿಟ್ಟಿದೆ.
ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿಕೆಶಿ ಹೆಸರನ್ನು ಯಾರೂ ಪ್ರಸ್ತಾಪಿಸುತ್ತಿಲ್ಲ. ಹಾಗೇ ನೋಡಿದರೆ ಏದುಸಿರು ಬಿಡುತ್ತಿರುವ ಪಕ್ಷವನ್ನು ಕಟ್ಟುವ ತಾಕತ್ತು ಇರುವುದು ಡಿಕೆಶಿಗೆ. ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ಅವರು ಪ್ರಭಾವಶಾಲಿ ಅಲ್ಲ ಅನ್ನುವುದೊಂದೇ ಅವರಿಗೆ ಇರುವ ಹಿನ್ನಡೆ.
ಒಟ್ಟಿನಲ್ಲಿ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಬೇಕಾದರೆ ಹೈಕಮಾಂಡ್ ಮನಸ್ಸು ಮಾಡಬೇಕು. ರಾಜ್ಯ ಮಟ್ಟದಲ್ಲಿ ಅವರ ಹೆಸರನ್ನು ಮುನ್ನಲೆಗೆ ತರುವ ಮನಸ್ಸು ಅದ್ಯಾವ ನಾಯಕನಿಗೂ ಇಲ್ಲ. ಒಂದು ವೇಳೆ ಡಿಕೆಶಿಗೆ ಕೆಪಿಸಿಸಿ ಪಟ್ಟ ದಕ್ಕಿದರೆ ನಾವೆಲ್ಲ ಮೂಲೆಗುಂಪಾಗುತ್ತೇವೆ ಅನ್ನುವ ಖಚಿತತೆ ಅವರಿಗೂ ಇದೆ.
Discussion about this post