ಮಂಗಳೂರು : ಈ ಸರ್ಕಾರಿ ಅಧಿಕಾರಿಗಳು ಅಂದ್ರೆ ಸಾಕು ಜನ ಸಾಮಾನ್ಯರು ಮೂಗು ಮುರಿಯುತ್ತಾರೆ. ಕಾರಣ ಸಿಂಪಲ್ ಸರ್ಕಾರಿ ಅಧಿಕಾರಿ ಅಂದ್ರೆ ಭ್ರಷ್ಟ ಅನ್ನುವ ಮನೋಭಾವನೆ ಜನರಲ್ಲಿದೆ. ಇದು ಹೌದು ಅನ್ನಿಸುವ ಹತ್ತು ಹಲವು ಘಟನೆಗಳು ನಡೆದಿದೆ. ಅದಕ್ಕೆ ಸಾಕ್ಷಿ ಎಸಿಬಿ ಮತ್ತು ಲೋಕಾಯುಕ್ತ ನಡೆಸಿದ ದಾಳಿ. ಈ ಭ್ರಷ್ಟರ ಕಾರಣದಿಂದಲೇ ಶುದ್ಧ ಹಸ್ತದ ಸರ್ಕಾರಿ ಸಿಬ್ಬಂದಿಯೂ ತಲೆ ತಗ್ಗಿಸುವಂತಾಗಿದೆ. ಇನ್ನು ಸರ್ಕಾರಿ ಕಚೇರಿಯಲ್ಲಿ ಕಾಸಿಲ್ಲದೆ ಅದ್ಯಾವ ಕೆಲಸವಾಗುತ್ತದೆ ಹೇಳಿ.
ಹೀಗೆ ಜಮೀನಿನ ಇ ನಕ್ಷೆ ಸಲುವಾಗಿ ಗ್ರಾಮಕರಣಿಕರ ಕಚೇರಿಗೆ ಅರ್ಜಿ ಸಲ್ಲಿಸಿ 16 ತಿಂಗಳು ಕಳೆದರೂ ಅರ್ಜಿ ವಿಲೇವಾರಿಗೊಳ್ಳದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಧರ್ಮಪಾಲ ಗೌಡ ಅನ್ನುವವರು ತಮ್ಮ ಜಾಗದ ಇ ನಕ್ಷೆ ತಯಾರಿಸಲು ಅರ್ಜಿ ಸಲ್ಲಿಸಿ ಹಣವನ್ನೂ ಪಾವತಿಸಿದ್ದರು. ಆದರೆ ಕಡಬ ಗ್ರಾಮಕರಣಿಕರ ಕಚೇರಿಯಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. 2020ರ ಮಾರ್ಚ್ 17ರಂದು ಸಲ್ಲಿಸಿದ್ದ ಅರ್ಜಿಯನ್ನು ಅಧಿಕಾರಿಗಳು ಅದೆಲ್ಲಿ ಸಿಕ್ಕಿಸಿಕೊಂಡಿದ್ದರೊ ಗೊತ್ತಿಲ್ಲ.
ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಧರ್ಮಪಾಲ ಗೌಡ ವಿಧಿಯಿಲ್ಲದೆ ಪ್ರಧಾನಮಂತ್ರಿ ಸಚಿವಾಲಯಕ್ಕೆ ಪತ್ರ ಬರೆದು ಪ್ರಧಾನ ಸೇವಕರಿಂದ ನ್ಯಾಯದ ನಿರೀಕ್ಷೆ ಪಟ್ಟರು. ನಿರೀಕ್ಷೆ ಸುಳ್ಳಾಗಲಿಲ್ಲ. ಪ್ರಧಾನಿ ಮಂತ್ರಿ ಕಾರ್ಯಾಲಯ ಇದೀಗ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರದು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಮುಖ್ಯಕಾರ್ಯದರ್ಶಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು ವಿವರಣೆ ಬಯಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕಡಬ ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದು ಅಗತ್ಯ ಕ್ರಮ ಕೈಗೊಂಡು ವರದಿ ನೀಡಿ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಸಚಿವಾಲಯ ಧರ್ಮಪಾಲ ಗೌಡ ಅವರಿಗೆ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಗ್ರಾಮಕರಣಿಕನೊಬ್ಬ ಮಾಡದ ಕೆಲಸವನ್ನು ಪ್ರಧಾನಮಂತ್ರಿ ಕಡೆಯಿಂದ ಮಾಡಿಸಬೇಕಾಗಿ ಬಂದಿರುವುದು ದುರಂತವೇ ಸರಿ. ಒಂದು ವೇಳೆ ಅಧಿಕಾರಿ ತಪ್ಪು ಮಾಡಿದ್ರೆ ಮನೆಗೆ ಕಳುಹಿಸುವುದೇ ಉತ್ತಮ.
Discussion about this post