ವಿವಾದಿತ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ಮತ್ತೆ ಸುದ್ದಿಯಲ್ಲಿದ್ದಾನೆ. ಬೆಂಗಳೂರಿನ ಬಿಡದಿಯಲ್ಲಿ ಆಶ್ರಮದಲ್ಲಿದ್ದ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದಾನೆ ಎಂದು ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೆಟ್ಟಲೇರಿದ್ದಾರೆ.
ಜನಾರ್ಧನ ಶರ್ಮಾ ಮತ್ತು ಅವರ ಪತ್ನಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಬಂಧ ಮುಕ್ತಗೊಳಿಸಿ ನಮಗೆ ಒಪ್ಪಿಸಬೇಕೆಂದು ಕೋರ್ಟ್ ಮೆಟ್ಟಲೇರಿರುವ ಬೆಂಗಳೂರಿನ ದಂಪತಿಗಳು, ಈ ದೂರಿನ ಅನ್ವಯ ಅಹಮದಾಬಾದ್ ಪೊಲೀಸರು ನಿತ್ಯಾನಂದ ಸ್ವಾಮೀಜಿ ಮತ್ತು ಆಶ್ರಮದ ಇಬ್ಬರು ವಾರ್ಡನ್ ಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
2013ರಲ್ಲಿ ಜನಾರ್ಧನ ಶರ್ಮಾ ಅವರು 7 ರಿಂದ 15 ವರ್ಷದೊಳಗಿನ ತಮ್ಮ ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಬೆಂಗಳೂರಿನಲ್ಲಿರುವ ನಿತ್ಯಾನಂದನ ಶಿಕ್ಷಣ ಸಂಸ್ಥೆಗೆ ಸೇರಿಸಿದ್ದರು. ಈಗ ಅವರೆಲ್ಲರನ್ನು ಅಹಮದಾಬಾದ್ ನ ದೆಹಲಿ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ನಿತ್ಯಾನಂದನ ಧ್ಯಾನಪೀಠವಾಗಿರುವ ಯೋಗಿನಿ ಸರ್ವಜ್ಞಾನಪೀಠಂ ಎಂಬಲ್ಲಿಗೆ ವರ್ಗಾಯಿಸಲಾಗಿದೆ ಅನ್ನುವುದು ದಂಪತಿಗಳು ಕೋರ್ಟ್ ಗೆ ಸಲ್ಲಿಸಿರುವ ದೂರಿನ ಉಲ್ಲೇಖ.
ಮಕ್ಕಳನ್ನು ಭೇಟಿ ಮಾಡಲು ಹೋದರೆ ಅದಕ್ಕೆ ಆಶ್ರಮದ ಮಂದಿ ಅವಕಾಶ ನೀಡುತ್ತಿಲ್ಲ. ಹೀಗಾಗಿ ನಮಗೆ ಅನುಮಾನವಿದೆ. ಎಲ್ಲೋ ಏನೋ ಎಡವಟ್ಟಾಗಿದೆ ಎಂದು ದಂಪತಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಮ್ಮ ಮಕ್ಕಳು ತಮಗೆ ಬೇಕು ಎಂದು ದಂಪತಿ ಗುಜರಾತ್ ಕೋರ್ಟ್ ಮೊರೆ ಹೋಗಿದ್ದಾರೆ.
ಈ ನಡುವೆ ಸಂಸ್ಥೆ ಸೇರಿದ್ದ ನಾಲ್ವರು ಮಕ್ಕಳ ಪೈಕಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಪೊಲೀಸರ ಸಹಾಯದಿಂದ ಹೊರ ತರಲಾಗಿದೆ. ಆದರೆ ಇನ್ನಿಬ್ಬರು ಹಿರಿಯ ಪುತ್ರಿಯರಾದ ಲೋಪಮುದ್ರ ಜನಾರ್ಧನ ಶರ್ಮಾ (21) ಮತ್ತು ನಂದಿತಾ (18) ಪೋಷಕರ ಜೊತೆ ಬರಲು ನಿರಾಕರಿಸಿದ್ದಾರೆ.
ಇದೇ ಕಾರಣದಿಂದ ಅವರನ್ನು ತಮ್ಮ ವಶಕ್ಕೆ ಒಪ್ಪಿಸಲು ಶಿಕ್ಷಣ ಸಂಸ್ಥೆಗೆ ಸೂಚಿಸಿ ಎಂದು ಕೋರ್ಟ್ ಗೆ ದಂಪತಿ ಮನವಿ ಸಲ್ಲಿಸಿದ್ದಾರೆ.
ಈ ನಡುವೆ ಕೆಲ ದಿನಗಳ ಹಿಂದೆ ದಂಪತಿಗಳ ಪುತ್ರಿ ಎನ್ನಲಾಗುತ್ತಿರುವ ನಿತ್ಯಾನಂದಿತಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ವಇಚ್ಛೆಯಿಂದಲೇ ನಾನು ಆಶ್ರಮದಲ್ಲಿದ್ದೇನೆಂದು ಅದರಲ್ಲಿ ಆಕೆ ಹೇಳಿಕೊಂಡಿದ್ದಾಳೆ. ಕಳೆದ 6 ವರ್ಷಗಳಿಂದ ನಾನು ಆಶ್ರಮದಲ್ಲಿದ್ದು, ಸಂತೋಷವಾಗಿಯೇ ಇದ್ದೇನೆ. ಸನ್ಯಾಸಿನಿಯಾಗಿ ನಾನಿಲ್ಲಿ ಇದ್ದುಕೊಂಡಿದ್ದು, ಸ್ವಇಚ್ಛೆಯಿಂದ ನಾನು ಈ ದಾರಿಯನ್ನು ಆರಿಸಿಕೊಂಡಿದ್ದೇನೆ. ಹೆತ್ತವರಲ್ಲ ಯಾರೇ ಬಂದರೂ ನಾನು ಯಾರನ್ನೂ ಭೇಟಿಯಾಗುವುದಿಲ್ಲ. ಸನ್ಯಾಸಿನಿಯಾಗಿಯೇ ನಾನು ಜೀವನಪರ್ಯಂತ ಇರಲು ನಿರ್ಧಾರ ಮಾಡಿದ್ದೇನೆ ಅಂದಿದ್ದರು.
Discussion about this post