9 ದಿನಗಳ ಇಡಿ ಕಸ್ಟಡಿ ಅಂತ್ಯಗೊಂಡಿರುವ ಹಿನ್ನಲೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಈ ಸಂದರ್ಭದಲ್ಲಿ 5 ದಿನಗಳ ಕಾಲ ಮತ್ತೆ ಡಿಕೆಶಿಯವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ಇಡಿ ಪರ ಪರ ವಕೀಲ ASG ಕೆ.ಎಂ. ನಟರಾಜ್ ಮನವಿ ಮಾಡಿದ್ದಾರೆ.
ಈ ವೇಳೆ ನಿಮಗೆ ಮತ್ತೆ ಡಿಕೆ ಶಿವಕುಮಾರ್ ಕಸ್ಟಡಿಗೆ ಯಾಕೆ ಬೇಕು ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ಸವಿವರವಾಗಿ ವಾದ ಮಂಡಿಸಿದ ಕೆ.ಎಂ. ನಟರಾಜ್, ಆರೋಪಿ ದೊಡ್ಡ ಮೊತ್ತದ ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿದ್ದಾರೆ. ವಿದೇಶಗಳಲ್ಲೂ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿವೆ. ಈ ಎಲ್ಲಾ ವಿವರಗಳನ್ನು ನೀಡುವಲ್ಲಿ ಆರೋಪಿ ವಿಫಲರಾಗಿದ್ದಾರೆ ಹೀಗಾಗಿ ಮತ್ತಷ್ಟು ವಿಚಾರಣೆ ಅಗತ್ಯವಿದೆ ಎಂದರು.
ಮಾತ್ರವಲ್ಲದೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಹಾರಿಕೆಯ ಉತ್ತರಗಳನ್ನು ಕೊಟ್ಟಿದ್ದಾರೆ. ಕೆಲವೊಮ್ಮೆ ಸುದೀರ್ಘ ಉತ್ತರಗಳನ್ನು ಕೊಟ್ಟರೆ, ಮತ್ತೆ ಕೆಲವೊಮ್ಮೆ ಸಣ್ಣದಾಗಿ ಉತ್ತರಿಸುತ್ತಾರೆ. ಇನ್ನು ಹಲವು ಸಂದರ್ಭದಲ್ಲಿ ನಿದ್ದೆಗೆ ಜಾರುತ್ತಾರೆ. ತನಿಖೆಗೆ ಅವರು ಸಹಕರಿಸುತ್ತಿಲ್ಲ.
ಆರೋಪಿ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಜಾಮೀನು ಕೊಟ್ಟರೆ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿದೆ. ಹೀಗಾಗಿ ಅವರಿಗೆ ಬೇಲ್ ನೀಡದೆ, ವಿಚಾರಣೆ ಸಲುವಾಗಿ ಇಡಿ ವಶಕ್ಕೆ ಕೊಡಿ ಎಂದು ಮನವಿ ಮಾಡಿದರು.
ಇದಾದ ಬಳಿಕ ಡಿಕೆಶಿ ಪರ ವಕೀಲರು ಜಾಮೀನು ಪರವಾಗಿ ವಾದ ಮಂಡನೆ ಪ್ರಾರಂಭಿಸಿದರು.
Discussion about this post