ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಇಡಿ ವಶದಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ಅಂತ್ಯವಾಗಿದ ಹಿನ್ನಲೆಯಲ್ಲಿ ಇಂದು ಅವರನ್ನು ರೋಸ್ ಅವೆನ್ಯೂ ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
ಈ ವೇಳೆ ಡಿಕೆಶಿ ಪರ ವಕೀಲರು ಜಾಮೀನು ಕೊಡಿ ಎಂದು ಮನವಿ ಮಾಡಿದರೆ, ಇಡಿ ಪರ ವಕೀಲರು ಜಾಮೀನು ಕೊಡಲೇ ಬೇಡಿ, ಜೈಲಿಗೆ ಕಳುಹಿಸಿ ಎಂದು ಮನವಿ ಮಾಡಿದರು.
ಡಿಕೆಶಿ ಪರ ವಾದ ಮಂಡಿಸಿದ ಮುಕುಲ್ ರೋಹಟಗಿ, ಅಭಿಷೇಕ್ ಮನು ಸಿಂಘ್ವಿ, ಮತ್ತು ದಯಾನ್ ಕೃಷ್ಣನ್, ಡಿಕೆಶಿ ಆರೋಗ್ಯ, ಅವರು ಈ ಹಿಂದೆ ತಪ್ಪು ಮಾಡಿಲ್ಲ, ಅವರ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ ಹೀಗೆ ಹತ್ತು ಹಲವು ಅಂಶಗಳನ್ನು ನ್ಯಾಯಾಧೀಶರ ಮುಂದಿಟ್ಟರು.
ಆದರೆ ಇಡಿ ವಕೀಲರು ಇದಕ್ಕೆಲ್ಲಾ ಕೌಂಟರ್ ವಾದ ಮಂಡಿಸಿ, ಅವರಿಗೆ ಜಾಮೀನು ಕೊಟ್ಟರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆಗಳಿದೆ ಎಂದರು.
ಒಂದು ಹಂತದಲ್ಲಿ ಮುಕುಲ್ ರೋಹಟಗಿ, ನೀವು ಯಾವುದೇ ಷರತ್ತು ವಿಧಿಸಿ ಆದರೆ ಜಾಮೀನು ಕೊಡಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಕೊನೆಗೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಡಿಕೆಶಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರ ಸಂಜೆ 3 ಗಂಟೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಈ ವೇಳೆ ಮತ್ತೆ ಡಿಕೆಶಿ ಆರೋಗ್ಯದ ಕುರಿತಂತೆ ಕಾಳಜಿ ವ್ಯಕ್ತಪಡಿಸಿದ ವಕೀಲರು ಅವರನ್ನು ಆಸ್ಪತ್ರೆಯಲ್ಲೇ ಇರಿಸಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಮೊದಲು ಅವರನ್ನು RML ಆಸ್ಪತ್ರೆಗೆ ಕರೆದೊಯ್ಯಿರಿ ವೈದ್ಯರ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಒಂದು ವೇಳೆ ಡಿಕೆಶಿ ಇಸ್ ಫಿಟ್ ಅಂದ್ರೆ ಇಂದು ಡಿಕೆಶಿ ತಿಹಾರ್ ಜೈಲು ಪಾಲಾಗ್ತಾರೆ. ನಿಜಕ್ಕೂಆರೋಗ್ಯ ಸಮಸ್ಯೆ ಇದೆ ಅನ್ನುವುದಾದರೆ ಆಸ್ಪತ್ರೆಗೆ ಆಡ್ಮಿಟ್ ಆಗಲಿದ್ದಾರೆ.
Discussion about this post