ಬೆಂಗಳೂರು : ರಾಜಕೀಯ ಸಂಧ್ಯಾ ಕಾಲದಲ್ಲಿರುವ ಬಿಎಸ್ ಯಡಿಯೂರಪ್ಪ ನಿರೀಕ್ಷೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ಬೊಕ್ಕಸ ಸಂಕಷ್ಟದಲ್ಲಿದ್ದರೂ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ.
ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ11.25 ರಿಂದ ಶೇ 21.50ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಈ ಆದೇಶ ಜುಲೈ 1 ರಿಂದ ಅನ್ವಯವಾಗಲಿದೆ. ತಮ್ಮ ರಾಜೀನಾಮೆಗೂ ಈ ಪ್ರಸ್ತಾಪದ ಕಡತವನ್ನು ತಯಾರಿಸುವಂತೆ ಸೂಚಿಸಿದ್ದರು. ಈ ಆದೇಶಕ್ಕೆ ಮುಖ್ಯಮಂತ್ರಿಗಳು ವಾರದ ಹಿಂದೆಯೇ ಸಹಿ ಮಾಡಿದ್ದರು. ವಿದಾಯದ ಭಾಷಣದಲ್ಲೂ ಸರ್ಕಾರಿ ನೌಕರರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು, ಸರ್ಕಾರಿ ನೌಕರರ ಕಾರ್ಯವನ್ನು ಶ್ಲಾಘಿಸಿದ್ದರು. ಸಿಎಂ ರಾಜಭವನಕ್ಕೆ ತೆರಳುತ್ತಿದ್ದಂತೆ ತುಟ್ಟಿ ಭತ್ಯೆ ಹೆಚ್ಚಳದ ಆದೇಶ ಹೊರ ಬಿದ್ದಿದೆ.
ಕೊರೋನಾ ಕಾರಣದಿಂದ ಜಗತ್ತು ಸಂಕಷ್ಟದಲ್ಲಿದೆ.ಕರ್ನಾಟಕವೂ ಹೊರತಲ್ಲ. ಅನೇಕ ಕಂಪನಿಗಳು ಬಾಗಿಲು ಹಾಕಿವೆ. ಉಳಿದಿರುವ ಕಂಪನಿಗಳು ಅನಿವಾರ್ಯವಾಗಿ ನೌಕರರ ಸಂಬಳವನ್ನು ಕಡಿತ ಮಾಡುತ್ತಿದೆ. ದುರಂತ ಅಂದ್ರೆ ಹಲವು ಖಾಸಗಿ ಕಂಪನಿಗಳು ಅರ್ಧದಷ್ಟು ಸಂಬಳವನ್ನು ಕಡಿತ ಮಾಡಿದೆ. ಇನ್ನು ಕೆಲವು ಕಂಪನಿಗಳು ನೌಕರರಿಗೆ ಸಂಬಳ ಕೊಡದೆ ಹಲವು ತಿಂಗಳುಗಳೇ ಕಳೆದಿದೆ.
ಇನ್ನು ಕೊರೋನಾ ಕಾರಣದಿಂದ ಬೊಕ್ಕಸವೂ ಸಂಕಷ್ಟದಲ್ಲಿದೆ. ಹರಿದು ಬರಬೇಕಾಗಿದ್ದ ತೆರಿಗೆಯೂ ಬರುತ್ತಿಲ್ಲ. ಇದನ್ನು ಸಿಎಂ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದ ಮೇಲೆ ಬೊಕ್ಕಸಕ್ಕೆ ಮತ್ತೆ ಹೊರೆಯಾಗುವ ತುಟ್ಟಿ ಭತ್ಯೆ ಹೆಚ್ಚಿಸುವ ಅಗತ್ಯವಿತ್ತಾ. ಕೊರೋನಾ ಸಂಕಷ್ಟ ದೂರವಾಗಿ ಬೊಕ್ಕಸ ಒಂದು ಹಂತಕ್ಕೆ ಸದೃಢವಾದ ನಂತರ ತುಟ್ಟಿ ಭತ್ಯೆಯನ್ನು ಹೆಚ್ಚಿಸಬಹುದಿತ್ತು ತಾನೇ..?
Discussion about this post