ಬೆಂಗಳೂರು : ನಮ್ದು ರೈತ ಪರ ಸರ್ಕಾರ ಎಂದು ಎಲ್ಲಾ ಮುಖ್ಯಮಂತ್ರಿಗಳು ಹೇಳಿದಂತೆ ಬಸವರಾಜ ಬೊಮ್ಮಾಯಿಯವರು ಕೂಡಾ ಹೇಳಿದ್ದಾರೆ. ಆದರೆ ಸರಳತೆಯ ನೆಪದಲ್ಲಿ ಕೃಷಿಕರ ಮೇಲೆ ಸರ್ಕಾರ ಸದ್ದಿಲ್ಲದೆ ಗದಾ ಪ್ರಹಾರ ಮಾಡಿದೆ.
ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದು. ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದು ಎಂದು ಸೂಚಿಸಲಾಗಿದೆ.
ಕನ್ನಡ ಪುಸ್ತಕಗಳನ್ನು ನೀಡುವ ನಿರ್ಧಾರ ಒಳ್ಳೆಯದು ಹಾಗಂತ ಹಣ್ಣು, ಹೂ ಗುಚ್ಛ, ನೆನಪಿನ ಕಾಣಿಕೆ ನೀಡಬಾರದು ಅನ್ನುವುದು ಯಾವ ನ್ಯಾಯ. ರಾಜ್ಯದ ಅನೇಕ ಹೂ ಬೆಳೆಗಾರರಿಗೆ ಇದರಿಂದ ನಷ್ಟವಾಗುವುದಿಲ್ಲವೇ, ಈಗಾಗಲೇ ಕೊರೋನಾ ಕಾರಣದಿಂದ ಹೂ ಬೆಳೆಗಾರರು ಮದುವೆ, ಜಾತ್ರೆಗಳು ರದ್ದುಗೊಂಡಿರುವುದರಿಂದ ಸಂಕಷ್ಟದಲ್ಲಿದ್ದಾರೆ. ಇನ್ನು ಹಣ್ಣಿನ ಬುಟ್ಟಿ ಕೊಡಬೇಡಿ ಅಂದ್ರೆ ರಾಜ್ಯ ಹಣ್ಣು ಬೆಳೆಗಾರರ ಕಥೆಯೇನಾಗಬೇಕು, ನೆನಪಿನ ಕಾಣಿಕೆ ಕೊಡಬೇಡಿ ಅಂದ್ರೆ ರಾಜ್ಯದ ಕರ ಕುಶಲಕರ್ಮಿಗಳ ಹೊಟ್ಟೆ ಮೇಲೆ ಹೊಡೆದಂತೆ ತಾನೇ.
ಬದಲಾಗಿ ಹೂ ಹಣ್ಣು ನೆನಪಿನ ಖರೀದಿಗೊಂದು ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಲಿ. ಹೂ ಹಣ್ಣುಗಳನ್ನು ರೈತರಿಂದ ನೇರವಾಗಿ ಅಥವಾ ನೋಡೆಲ್ ಎಜೆನ್ಸಿ ಮೂಲಕ ಖರೀದಿಸಬೇಕು, ನೆನಪಿನ ಕಾಣಿಕೆಗಳನ್ನು ಕಾವೇರಿ ಎಂಪೋರಿಯಂ ನಲ್ಲೇ ಕೊಂಡುಕೊಳ್ಳಬೇಕು ಅಂದ್ರೆ ರೈತರ, ಕರ ಕುಶಲಕರ್ಮಿಗಳ ಹಿತ ಕಾಪಾಡಿದಂತಾಗುತ್ತದೆ. ಜೊತೆಗೆ ಹೂ, ಹಣ್ಣು, ಶಾಲು, ಹಾರ, ತುರಾಯಿ ಎಂದು ಅಧಿಕಾರಿಗಳು ನಡೆಸುವ ಭ್ರಷ್ಟಚಾರ ತಡೆಯಲು ಕ್ರಮವೊಂದನ್ನು ಕೈಗೊಂಡಿದ್ರೆ ಚೆನ್ನಾಗಿತ್ತು.
ಸರಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ನೀಡಬಾರದು ಅನ್ನುವ ಆದೇಶ ಹೊರ ಬಿದ್ದಿದೆ. ಆದರೆ ಮೊನ್ನೆ ಮೊನ್ನೆ ದೆಹಲಿ ಹೋಗಿದ್ದ ಬೊಮ್ಮಾಯಿವರು ಪ್ರಧಾನಿ ಸೇರಿದಂತೆ ಅನೇಕ ಗಣ್ಯರಿಗೆ ನೆನಪಿನ ಕಾಣಿಕೆ ಕೊಟ್ಟು ಬರಲಿಲ್ಲವೇ, ಬದಲಾಗಿ ಮೋದಿ, ಶಾ ಕೈಗೊಂದು ಪುಸ್ತಕ ಕೊಟ್ಟು ಬರಬಹುದಿತ್ತು ತಾನೇ. ಹೋಗ್ಲಿ ದೇವೇಗೌಡರನ್ನು ಭೇಟಿ ಮಾಡಲು ಸಿಎಂ ಹೋಗಿದ್ದ ವೇಳೆ ಶಾಲು ಹಾರ ಹಾಕಿ ಬರಲಿಲ್ಲವೇ. ಬದಲಾಗಿ ಮಾಜಿ ಪ್ರಧಾನಿಗಳ ಕೈಗೆ ಪುಸ್ತಕವೊಂದನ್ನು ಕೊಡಬಹುದಿತ್ತು ತಾನೇ. ಈ ಮೂಲಕ ಒಳ್ಳೆಯ ಸಂಪ್ರದಾಯಕ್ಕೆ ನಾಂದಿ ಹಾಡಬಾರದಿತ್ತಾ..?
Discussion about this post