ಬೆಂಗಳೂರು : ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರಾ ಕೊಟ್ಟೂರು ಹಾಗೂ ನಾಗಾರ್ಜುನ್ ನಡುವಿನ ಮದುವೆ ವಿವಾದ ಇತ್ಯರ್ಥಕ್ಕೆ ಎರಡೂ ಕುಟುಂಬಗಳು ಪ್ರಯತ್ನ ಮುಂದುವರಿಸಿದೆ. ಈಗಾಗಲೇ ಪೊಲೀಸರು ಎರಡು ದಿನಗಳ ಗಡುವು ಕೊಟ್ಟ ಕಾರಣ ಠಾಣೆಯ ಮೆಟ್ಟಿಲು ಹತ್ತದೇ ವಿವಾದ ಇತ್ಯರ್ಥಗೊಳಿಸುವ ಪ್ರಯತ್ನಗಳು ನಡೆದಿದೆ.
ಈ ನಡುವೆ ಚೈತ್ರಾ ಕೊಟ್ಟೂರು ತಮ್ಮ ಪ್ರೀತಿ, ಪ್ರೇಮ ಮದುವೆ ಕುರಿತಂತೆ ಮಾತನಾಡಿದ್ದು, ಇದೊಂದು ಬಲವಂತದ ಮದುವೆಯಲ್ಲ ಅಂದಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿ ಬಂದ ಬಳಿಕ ನನಗೆ ನಾಗಾರ್ಜುನ್ ಪರಿಚಯವಾಯ್ತು. ಕಾರಣಗಳಿಲ್ಲದೆ ಇಬ್ಬರೂ ಪರಸ್ಪರ ಆಕರ್ಷಿತರಾದೆವು. ಮುಂದೆ ಸಾಗಿದಂತೆ ಇಬ್ಬರ ನಡುವೆ ಆಪ್ತತೆ ಬೆಳೆಯಿತು. ಹೀಗೆ ಆಪ್ತತೆ ಬೆಳೆಯುತ್ತಾ ಹೋದಂತೆ ಹೊರಗೆ ಭೇಟಿ, ಮನೆಯಲ್ಲಿ ಭೇಟಿಗಳು ನಡೆಯುತ್ತಿತ್ತು. ಆ ವೇಳೆ ಎಲ್ಲವೂ ಚೆನ್ನಾಗಿತ್ತು. ಪರಸ್ಪರರ ಪ್ರೀತಿಯ ಆಪ್ತತೆ ಅತೀವವಾಗಿತ್ತು.
ನಾಗಾರ್ಜುನ್ ಹುಟ್ಟುಹಬ್ಬವನ್ನು ಕೂಡಾ ಅದ್ದೂರಿಯಾಗಿ ಆಚರಿಸಲಾಗಿತ್ತು. ಹುಟ್ಟು ಹಬ್ಬದಂದು ಅವನಿಗೆ ಚಿನ್ನದ ಬ್ರೇಸ್ ಲೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದೆ.
ಮಾತ್ರವಲ್ಲದೆ ಬರ್ತ್ ಡೇ ಆಚರಣೆಯ ಫೋಟೋಗಳನ್ನು ನನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದೆ. ಇಷ್ಟೆಲ್ಲಾ ಆಪ್ತವಾಗಿದ್ದ ಹುಡುಗ, ಮದುವೆ ವಿಚಾರ ಗಂಭೀರವಾಗುತ್ತಿದ್ದಂತೆ ಬೇರೆಯದ್ದೇ ರೀತಿಯಲ್ಲಿ ನಡೆದುಕೊಳ್ಳಲು ಶುರುಮಾಡಿದ.
ಮನೆಯವರ ನೆಪ, ಜಾತಿ, ಅಂತಸ್ಥಿನ ನೆಪ ಶುರು ಮಾಡಿದ. ವಿಷಯ ಮತ್ತಷ್ಟು ಗಂಭೀರವಾಗುತ್ತಿದ್ದಂತೆ ನಾನು ಸಿನಿಮಾದವಳು ಅನ್ನುವ ನೆಪ ಶುರುವಾಯ್ತು. ಕೇವಲ ಆತನಿಂದ ಮಾತ್ರವಲ್ಲದೆ ಆತನ ಮನೆಯವರಿಂದಲೂ ನೆಪ ಶುರುವಾಯ್ತು. ಒಮ್ಮೆ ಮದುವೆಗೆ ಆಯ್ತು ಅಂದ್ರೆ ಮತ್ತೊಮ್ಮೆ ಇಲ್ಲ ಅನ್ನುತ್ತಿದ್ದ. ಈ ಸಮಸ್ಯೆಯನ್ನು ಗೆಳೆಯರ ಬಳಿ ಹೇಳಿಕೊಂಡಾಗ ಮದುವೆಯಾದರೆ ಎಲ್ಲವೂ ಸರಿಯಾಗುತ್ತದೆ ಅನ್ನುವ ಸಲಹೆ ಬಂತು.
ಹಾಗೇ ಮದುವೆಯೂ ಆಯ್ತು. ಮದುವೆಯಾಗಬೇಕು ಅಷ್ಟೇ ತಾನೇ, ಸರಿ ಆಗ್ತೀನಿ ಎಂದು ಮದುವೆಯೂ ಆದ.
ಆದರೆ ಇದೀಗ ಅವನ ಮನೆಯವರು ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನೀನು ನಡೆತೆಗೆಟ್ಟವಳು, ಸೊಸೆಯಾಗುವುದಕ್ಕೆ ಯೋಗ್ಯತೆ ಇಲ್ಲದವಳು ಅನ್ನುತ್ತಿದ್ದಾರೆ.
ಮಾತ್ರವಲ್ಲದೆ ನಮ್ಮ ಮನೆಯ ಬಳಿ ಬಂದು, ಮನೆಯ ರಸ್ತೆ ಮಂದಿ ನೋಡುವಂತೆ ಕಿರುಚಾಡಿ ಗಲಾಟೆ ಮಾಡಿ, ಕೊಲ ಬೆದರಿಕೆ ಹಾಕಿ, ನಮ್ಮ ಮಾನಮರ್ಯಾದೆ ಹರಾಜು ಹಾಕಿ ಹೋಗಿದ್ದಾರೆ.
ನಾನು ಪೊಲೀಸ್ ಠಾಣೆಗೆ ದೂರು ನೀಡಲು ಹೋದ್ರೆ ಹುಡುಗನ ಭಾವಂದಿರು ದೂರು ಕೊಡುವ ಮುನ್ನ ಒಂದೆರೆಡು ದಿನ ಸಮಯ ತೆಗೆದುಕೊಂಡು ಕೂತು ಮಾತನಾಡೋಣ ಅಂದರು.
ಆಮೇಲೆ ಅವರೇ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಹೀಗಾಗಿ ಅವರ ಮನೆಯವರ ಡಬ್ಬಲ್ ಗೇಮ್ ಮತ್ತೆ ಸಾಬೀತಾಗಿದೆ.
ಇನ್ನು ಎರಡು ದಿನ ಟೈಮ್ ಇದೆ. ಏನಾಗುತ್ತದೋ ನೋಡೋಣ ಅಂದಿದ್ದಾರೆ ಚೈತ್ರ ಕೊಟ್ಟೂರು.
Discussion about this post