ನವದೆಹಲಿ : ಕೊರೋನಾ ಸೋಂಕಿನ ವೈರಸ್ ರೂಪಾಂತರಿಯಿಂದ ತತ್ತರಿಸಿರುವ ಭಾರತಕ್ಕೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ದೇಶದಲ್ಲಿ ಹೆಚ್ಚು ಅಪಾಯಕಾರಿ ಅನ್ನಿಸಿಕೊಂಡಿರುವ ಪೈಕಿ ಒಂದಾಗಿರುವ ಡೆಂಘೀ ಕೂಡಾ ರೂಪಾಂತರಿಯಾಗಿದೆಯಂತೆ. ಈ ಸಂಬಂಧ ಕೇಂದ್ರ ಸರ್ಕಾರವೇ ಎಚ್ಚರಿಕೆಯನ್ನು ರವಾನಿಸಿದ್ದು, ಡೆಂಘೀ-2 ಕಾಲಿಟ್ಟಿದ್ದು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಅಂದಿದೆ.
ಏನಿದು ಡೆಂಘೀ 2..?
ಡೆಂಘೀ ಜ್ವರ ಸೊಳ್ಳೆಗಳಿಂದ ಹರಡುತ್ತದೆ. ಈ ಜ್ವರಕ್ಕೆ ಮೂಲ ಕಾರಣ ಸೆರೋಟೈಪ್ ಅನ್ನುವ ವೈರಸ್. ಈ ಸೆರೋಟೈಪ್ ರೂಪಾಂತರಗೊಂಡಿದ್ದು, ಇದನ್ನು ವೈದ್ಯಕೀಯ ಭಾಷೆಯಲ್ಲಿ DENV -2 ಅಥವಾ D-2 ಎಂದು ಕರೆಯುತ್ತಾರೆ.
ಇತರ ಕಾಯಿಲೆಗಳಿಗೆ ಹೋಲಿಸಿದರೆ ಇದು ತೀರಾ ಅಪಾಯಕಾರಿಯಾಗಿದ್ದು, ಡೆಂಘೀಗೆ ಸೂಕ್ತ ಮೆಡಿಸಿನ್ ಲಭ್ಯವಿಲ್ಲ. ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಮನೆಯಲ್ಲೇ ರೋಗ ನಿಯಂತ್ರಣ, ಡೆಂಘೀ ಲಕ್ಷಣಗಳ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಅರಿವು ಅನಿವಾರ್ಯವಾಗಿದೆ.
ಯಾವೆಲ್ಲಾ ರಾಜ್ಯಗಳಿಗೆ ಎಚ್ಚರಿಕೆ..?
ಕರ್ನಾಟಕ ಸೇರಿದಂತೆ ಒಟ್ಟು 11 ರಾಜ್ಯಗಳಿಗೆ ಕೇಂದ್ರ ಡೆಂಘೀ 2 ಕುರಿತಂತೆ ಎಚ್ಚರಿಕೆ ರವಾನಿಸಿದೆ. ಇದರಲ್ಲಿ ಆಂಧ್ರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಢಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಹೊಸ ಮಾದರಿಯ ಡೆಂಘೀ ಪತ್ತೆಯಾಗಿದೆ.
ಡೆಂಘೀ 2 ವಿನ ಲಕ್ಷಣಗಳು
ಅತಿಯಾದ ತಲೆನೋವು, ಜ್ವರ, ವಾಂತಿ, ಅಯಾಸ, ಆಂತರಿಕ ರಕ್ತಸ್ರಾವದ ಭೀತಿ. ಆಂತರಿಕ ರಕ್ತಸ್ರಾವವಾದರೆ ರಕ್ತದೊತ್ತಡ ಕುಸಿದು ರೋಗಿ ಸಾವನ್ನಪ್ಪಬಹುದು.
ಚಿಕಿತ್ಸೆ…!
ಡೆಂಘೀಗೆ ಈ ತನಕ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಲಸಿಕೆಯೂ ಇಲ್ಲ. ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೊಳ್ಳೆ ನಿರ್ಮೂಲನೆಯಿಂದ ಸೋಂಕು ನಿಯಂತ್ರಿಸಬಹುದಾಗಿದೆ. ಜೊತೆಗೆ ಯಾವುದೇ ಜ್ವರ ಕಾಣಿಸಿಕೊಂಡರೂ ಮನೆ ಮದ್ದು ಬಿಟ್ಟು ವೈದ್ಯರನ್ನು ಕಾಣಬೇಕು. ರಕ್ತ ಪರೀಕ್ಷೆ ಸೇರಿ ರೋಗವನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು.
Discussion about this post