ರಾಜ್ಯದಲ್ಲಿ ಉಂಟಾಗಿರುವ ಭೀಕರ ನೆರೆ ಹಾವಳಿಯಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವಾಗಲು ರಾಜ್ಯದ ಬೊಕ್ಕಸದಲ್ಲಿ ಕಾಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರದಿಂದ ನ್ಯಾಯಯುತವಾಗಿ ಬರಬೇಕಾಗಿರುವ ಕಾಸಿಗೆ ಎದುರು ನೋಡಲಾಗುತ್ತಿದೆ.
ಆದರೆ ಕೇಂದ್ರ ಸರ್ಕಾರ ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲು ಅದ್ಯಾಕೆ ವಿಳಂಭ ಧೋರಣೆ ಮಾಡುತ್ತಿದೆಯೋ ಗೊತ್ತಿಲ್ಲ. ನಿರ್ಮಲಾ ಸೀತರಾಮನ್, ಅಮಿತ್ ಶಾ ನೆರೆಯಿಂದ ಆಗಿರುವ ಅನಾಹುತವನ್ನು ಕಣ್ಣಾರೆ ನೋಡಿ ಹೋಗಿದ್ದಾರೆ. ಆದರೆ ಪರಿಹಾರ ಮಾತ್ರ ಗಗನ ಕುಸುಮವಾಗಿದೆ.
ಈ ನಡುವೆ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ತುಮಕೂರಿನಲ್ಲಿ ಮಾತನಾಡಿ ಕೇಂದ್ರ ಸರ್ಕಾರದಿಂದ ಅನುದಾನ ಬರುವುದು ತಡವಾಗಿದೆ. ನೆರೆ ಪೀಡಿತ ಬೇರೆ ರಾಜ್ಯಗಳಿಗೂ ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ. ಹಾಗಿದ್ದರೂ ಯಡಿಯೂರಪ್ಪ 1500 ಕೋಟಿ ಹಣವನ್ನು ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಿದ್ದಾರೆ ಅಂದಿದ್ದಾರೆ.
ಯಾವ ಕಾರಣಕ್ಕೆ ಅನುದಾನ ಬಂದಿಲ್ಲ ಅನ್ನುವುದಕ್ಕೆ ಉತ್ತರವಿಲ್ಲ ಅಂದಿರುವ ವಿಜಯೇಂದ್ರ ನರೇಂದ್ರ ಮೋದಿಯವರು ಪರಿಹಾರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.
ದೇಶದ 16 ರಾಜ್ಯಗಳು ನೆರೆ ಹಾವಳಿಯಿಂದ ತತ್ತರಿಸಿವೆ. ಎಲ್ಲ ರಾಜ್ಯಗಳಿಂದ ವರದಿ ಬಂದ ನಂತರ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡುತ್ತದೆ ಅಂದಿದ್ದಾರೆ.
ಕರ್ನಾಟಕ ಸರಕಾರ ಮೊದಲು ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮೊದಲು ಹಣ ರಾಜ್ಯಕ್ಕೆ ಬಿಡುಗಡೆಯಾಗಲಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು ನಾಲ್ಕೈದು ದಿನ ಅಂದ್ರೆ ಸಂಸದೆ ಶೋಭಾ ಕರಂದ್ಲಾಜೆ 10 ದಿನದಲ್ಲಿ ಪರಿಹಾರ ಹಣ ಕೇಂದ್ರದಿಂದ ಬರಲಿದೆ ಅಂದಿದ್ದಾರೆ.
ಸೋಮವಾರವಷ್ಟೇ ಉಡುಪಿಯಲ್ಲಿ ನೆರೆ ಸಂತ್ರಸ್ಥರಿಗೆ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ವಿತರಣೆ ಮಾಡುತ್ತಿದೆ. ಮನೆ, ರಸ್ತೆ, ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಹಣದ ಅಗತ್ಯವಿದೆ. ಹಸಿ ಭೂಮಿಯಲ್ಲಿ ಕಾಮಗಾರಿ ನಡೆಸುವುದು ಅಸಾಧ್ಯ. ಹೀಗಾಗಿ ಒಂದು ತಿಂಗಳು ತಡವಾಗಿ ಕೇಂದ್ರ ಹಣ ಬಿಡುಗಡೆಯಾದರೂ ಅಡ್ಡಿಯಿಲ್ಲ ಅಂದಿದ್ದರು.
ಮಂಗಳವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಶೋಭಾ ಇನ್ನು 10 ದಿನಗಳಲ್ಲಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುವ ವಿಶ್ವಾಸವಿದೆ.
ಗುಜರಾತ್, ಮಹರಾಷ್ಟ್ರ, ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲೂ ನೆರೆಯಿಂದ ಹಾನಿ ಸಂಭವಿಸಿದೆ. ಕೇಂದ್ರ ಸರ್ಕಾರ ತಂಡ ಕಳಿಸಿ ಅಧ್ಯಯನ ಮಾಡಿಸಿದೆ. ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಬೇಕು ಅನ್ನುವುದನ್ನು ಲೆಕ್ಕ ಹಾಕಿ ಅನುದಾನ ಬಿಡುಗಡೆ ಮಾಡ್ತಾರೆ ಅನ್ನುವುದು ಶೋಭಾ ಅವರ ವಿಶ್ವಾಸ.
ಪರಿಸ್ಥಿತಿ ನೋಡಿದರೆ ಕೇಂದ್ರದಿಂದ ಹಣ ಬರುವ ಲಕ್ಷಣವಿಲ್ಲ. ಒಬ್ಬರು ನಾಲ್ಕು ದಿನ ಅಂತಾರೆ, ಮತ್ತೊಬ್ಬರು 10 ದಿನ ಅಂತಾರೆ. ಬಿಜೆಪಿ ಸಂಸದರಿಗೆ ಈ ಬಗ್ಗೆ ಮಾಹಿತಿ ಇಲ್ಲ ಅಂದ ಮೇಲೆ ನಾವು 25 ಸಂಸದರನ್ನು ಸಂಸತ್ತಿಗೆ ಕಳುಹಿಸಿದ್ದು ವ್ಯರ್ಥವಲ್ಲವೇ.
ಮೋದಿ ಮುಂದೆ ಹೋಗಿ ಮಾತನಾಡುವ ತಾಕತ್ತಿಲ್ಲ ಸಂಸದರನ್ನು ಕಟ್ಟಿಕೊಂಡು ನಾವು ರಾಜ್ಯಕ್ಕೆ ಪರಿಹಾರ ಹಣ ಬರುತ್ತದೆ ಎಂದು ಕಾಯುವುದು ಮೂರ್ಖತನವೇ ಸರಿ.
Discussion about this post