ಮೋದಿ ಉದ್ದದ ಭಾಷಣ ಮಾಡುವುದರಲ್ಲಿ ಮತ್ತು ವಿದೇಶ ತಿರುಗುವುದರಲ್ಲಿ ನಂಬರ್ ವನ್ ಅಂದುಕೊಂಡಿದ್ದಾರೆ. ರಾಜ್ಯದಲ್ಲಿ ಗೆದ್ದಿರುವ 25 ಸಂಸದರು ಕೂಡಾ ಮೋದಿ ಮುಂದೆ ಕೂತು ಅನುದಾನ ಬಿಡುಗಡೆ ಮಾಡಿಸುವುದಕ್ಕೆ ವಿಫಲರಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸೋಮವಾರ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ನೆರೆಯಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರದಿಂದ ಪರಿಹಾರ ಕೊಡಿಸಲು ಯಡಿಯೂರಪ್ಪ ನೇತೃತ್ವದ ಸರ್ಕಾರ ವಿಫಲವಾಗಿದ್ದು, ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ಟೀಕಿಸಿದರು,
ಯಡಿಯೂರಪ್ಪ ಹಾಗೂ ಮೋದಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಪ್ರವಾಹ ಇಳಿದ ಬಳಿಕವೂ ಕೇಂದ್ರದಿಂದ ಒಂದು ರೂಪಾಯಿ ಬಂದಿಲ್ಲ ಅಂದ್ರೆ ಅರ್ಥವೇನು. ಯಡಿಯೂರಪ್ಪ ನಿದ್ರೆ ಮಾಡದೆ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿಸಲಿ. ಅಸಾಧ್ಯವಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಒಂದು ವೇಳೆ ಈ ಸಂದರ್ಭದಲ್ಲಿ ನಾನು ಸಿಎಂ ಸ್ಥಾನದಲ್ಲಿರುತ್ತಿದ್ದರೆ, ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಿ ಕೇಂದ್ರವನ್ನೇ ಗಬ್ಬೆಬ್ಬಿಸಿ ಬಿಡುತ್ತಿದೆ. ರಾಜ್ಯದಲ್ಲಿ ಬರ ಬಂದಾಗ ಮೂರು ಬಾರಿ ನಿಯೋಗ ಕರೆದುಕೊಂಡು ಹೋಗಿದ್ದೆ ಎಂದು ಇದೇ ವೇಳೆ ಸಿದ್ದರಾಮಯ್ಯ ನೆನಪಿಸಿದರು.
ಸಿದ್ದರಾಮಯ್ಯ ಹೇಳಿರುವ ಮಾತು ನೂರಕ್ಕೆ ನೂರು ಸತ್ಯ. ಪ್ರಧಾನಿ ನರೇಂದ್ರ ಮೋದಿಗೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮೇಲಿದ್ದ ಅಕ್ಕರೆ ಈಗಿಲ್ಲ. ಹಾಗಿರುತ್ತಿದ್ದರೆ ನೆರೆ ಕುರಿತಂತೆ ಒಂದು ವೈಮಾನಿಕ ಸಮೀಕ್ಷೆಯನ್ನಾದರೂ ಪಿಎಂ ಮಾಡಬಹುದಿತ್ತು.
ಇನ್ನು ಅಮಿತ್ ಶಾ ನೆರೆ ಸಂದರ್ಭದಲ್ಲಿ ಬಂದ ಪುಟ್ಟ ಹೋದ ಪುಟ್ಟ ಅನ್ನುವಂತೆ ವರ್ತಿಸಿದ್ದರೆ. ಇನ್ನು ರಾಜ್ಯದ ಜನ ಗೆಲ್ಲಿಸಿ ಕಳುಹಿಸಿದ ಸಂಸದರೋ, ನೆರೆಗೂ ತಮಗೂ ಸಂಬಂಧವಿಲ್ಲ ಅನ್ನುವಂತಿದ್ದಾರೆ.
ಕೆಲ ಸಂಸದರು ಮೋದಿಗೆ ಬಹುಪರಾಗ್ ಹೇಳುವುದರಲ್ಲಿ ಬ್ಯುಸಿ. ಇನ್ನು ಕೆಲವರು ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುವುದರಲ್ಲಿ ನಿರತರು. ಮತ್ತೆ ಕೆಲವರು ಮೋದಿ ಕಣ್ಣಿಗೆ ಬಿದ್ದು ಸುಮ್ನೆ ಯಾಕೆ ಸೆಂಟ್ರಲ್ ನಲ್ಲಿ ಕೆಟ್ಟವರಾಗೋಣ ಅನ್ನುವಂತಿದ್ದಾರೆ.
ಇದರ ಬದಲಾಗಿ 25 ಸಂಸದರು ಒಟ್ಟಾಗಿ ಕೂತು, ಮೋದಿ ಬಳಿಗೆ ಹೋಗಿ, ನಮ್ಮ ರಾಜ್ಯ ಸಂಕಷ್ಟದಲ್ಲಿದೆ. ನಿಮ್ಮ ಹೆಸರಿನಲ್ಲಿ ನಾವು ಗೆದ್ದು ಬಂದಿದ್ದೇವೆ. ಈಗ ನೆರೆಗೆ ತುತ್ತಾದ ಜನರಿಗೆ ಬಿಡಿ ಇಡೀ ರಾಜ್ಯಕ್ಕೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯವಿಟ್ಟು ಪರಿಹಾರ ಹಣ ಕೊಡಿ ಇಲ್ಲ, ಇಲ್ಲವಾದರೆ ನಮ್ಮ ರಾಜೀನಾಮೆ ತೆಗೆದುಕೊಳ್ಳಿ ಎಂದು ಹೇಳಿ ಬರಲಿ. ಅದು ತಾಕತ್ತು.
Discussion about this post