ಬೆಂಗಳೂರು : ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ, ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಬಿಜೆಪಿ ನಾಯಕರು ಕೊಡುತ್ತಿರುವ ಹೇಳಿಕೆ ಬರೀ ಸುಳ್ಳು ಅನ್ನುವುದು ಸಾಬೀತಾಗಿದೆ. ಈ ಮೂಲಕ ರಾಜ್ಯದ ಜನರನ್ನು ಬಿಜೆಪಿ ನಾಯಕರು ಕತ್ತಲಲ್ಲಿ ಇಟ್ಟಿದ್ದಾರೆ ಅನ್ನುವುದು ಸ್ಪಷ್ಟವಾಗಿದೆ.
ತಮ್ಮ ರಾಜೀನಾಮೆ ಕುರಿತಂತೆ ಯಡಿಯೂರಪ್ಪ ಮಾತನಾಡಿದ್ದು, ಜುಲೈ 26 ರಂದು ತಾವು ಸಿಎಂ ಸ್ಥಾನದಿಂದ ನಿರ್ಗಮಿಸುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಶಾ ಅವರು, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ನನ್ನ ಬಗ್ಗೆ ವಿಶೇಷ ಪ್ರೀತಿ ಕಾಳಜಿ ತೋರಿಸಿದ್ದಾರೆ. ನಮ್ಮ ಪಕ್ಷದಲ್ಲಿ 75 ವರ್ಷ ದಾಟಿದವರಿಗೆ ಯಾವುದೇ ಸ್ಥಾನಮಾನ ಕೊಟ್ಟ ಉದಾಹರಣೆ ಇಲ್ಲ. ಆದರೆ ಯಡಿಯೂರಪ್ಪ ಕೆಲಸವನ್ನು ಮೆಚ್ಚಿ 79 ವರ್ಷದವರೆಗೆಗೂ ನನಗೆ ಅವಕಾಶ ಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲ ಪಡಿಸಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಉದ್ದೇಶ. ಹೀಗಾಗಿ 25ರಂದು ರಾಷ್ಟ್ರೀಯ ನಾಯಕರು ಯಾವ ಸೂಚನೆ ಕೊಡ್ತಾರೋ ಆ ತೀರ್ಮಾನವನ್ನು ನಾನು ಕೈಗೊಳ್ಳುತ್ತೇನೆ. 26ರಿಂದ ಪಕ್ಷ ಸಂಘಟನೆ ಕಾರ್ಯ ಪ್ರಾರಂಭವಾಗಲಿದ್ದು, ಜುಲೈ 26ಕ್ಕೆ ಸರ್ಕಾರಕ್ಕೆ ಎರಡು ತುಂಬಲಿದೆ. ಈ ನೆನಪಿನಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಬಳಿಕ ನಾನು ಪಕ್ಷ ಸಂಘಟನೆಗೆ ಇಳಿಯುತ್ತೇನೆ ಅಂದಿದ್ದಾರೆ.
ಇನ್ನು ಈ ಬೆಳವಣಿಗೆ ಬಗ್ಗೆ ರಾಜ್ಯದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿರುವ ಯಡಿಯೂರಪ್ಪ, ನನ್ನ ಪರವಾಗಿ ಪ್ರತಿಭಟನೆ ಹೇಳಿಕೆ ಚಳುವಳಿ ಸೂಕ್ತವಲ್ಲ ಎಂದು ಕೈ ಜೋಡಿಸಿ ಪ್ರಾರ್ಥಿಸಿದ್ದಾರೆ. ಇದೇ ವೇಳೆ ಮಠಾಧೀಶರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮಠಾಧೀಶರು ಬಂದು ಆಶೀರ್ವಾದ ಮಾಡಿದ್ದಾರೆ. ಈ ಭಾಗ್ಯ ಹಿಂದೆ ಯಾರಿಗೂ ಸಿಕ್ಕಿಲ್ಲ. ಹೀಗಾಗಿ ಇದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಅಂದಿದ್ದಾರೆ.
Discussion about this post