ನಿರೀಕ್ಷೆಯಂತೆ ರಾಜ್ಯ ಬಿಜೆಪಿಯಲ್ಲಿ ತಿಕ್ಕಾಟ ಪ್ರಾರಂಭವಾಗಿದೆ. ಈಗಾಗಲೇ ಸಂಪುಟ ವಿಸ್ತರಣೆಯಿಂದ ನೊಂದುಕೊಂಡಿರುವ ಅನೇಕ ನಾಯಕರು ಪಕ್ಷದ ಚಟುವಟಿಕೆಯಿಂದ ದೂರವುಳಿದಿದ್ದಾರೆ.
ಮತ್ತೊಂದು ಕಡೆ ಸಚಿವರಾದವರು ಸೂಕ್ತ ಸಚಿವ ಸ್ಥಾನ ಸಿಕ್ಕಿಲ್ಲ ಅನ್ನುವ ಕೊರಗಿನಲ್ಲಿದ್ದಾರೆ. ಆದರೆ ಖಡಕ್ಕ್ ಹೈಕಮಾಂಡ್ ಕಾರಣದಿಂದ ಅಸಮಾಧಾನವನ್ನು ಹೊರ ಹಾಕುವ ಸ್ಥಿತಿಯಲ್ಲಿ ಇವರಿಲ್ಲ. ಆದರೂ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರ ಹಾಕುವ ಕಾರ್ಯ ಸಾಗಿದೆ.
ಈ ನಡುವೆ ಉರಿವ ಬೆಂಕಿಗೆ ತುಪ್ಪ ಅನ್ನುವಂತೆ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಹೊಸ ಸಮಸ್ಯೆಗೆ ನಾಂದಿ ಹಾಡಿದೆ. ಇದು ಶುಕ್ರವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಹಿರಂಗವಾಗಿದೆ.
ನಿಗಮ ಮಂಡಳಿಗಳ ನೇಮಕ ಮಾಡುವಾಗ ಪಕ್ಷದ ಗಮನಕ್ಕೆ ತನ್ನಿ ಎಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಭೆಯಲ್ಲಿ ಸಿಎಂ ಬಿಎಸ್ವೈ ಗೆ ಸೂಚಿಸಿದ್ದಾರೆ. ಇದಕ್ಕೆ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡುವಾಗ ನಮ್ಮ ಗಮನಕ್ಕೆ ತನ್ನಿ ಎಂದು ನಳೀನ್ ಕುಮಾರ್ ಕಟೀಲ್ ಅವರಿಗೆ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದು ಬಂದಿದೆ
ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ನೇಮಕ ಮಾಡಿದ್ದಕ್ಕೆ ಗರಂ ಆದ ಬಿಎಸ್ ಯಡಿಯೂರಪ್ಪ, ಯಾರ ಗಮನಕ್ಕೂ ಬಾರದೇ ಹೇಗೆ ಪ್ರಧಾನ ಕಾರ್ಯದರ್ಶಿ ಮಾಡಿದ್ದು, ಇನ್ನು ಮುಂದೆ ಪದಾಧಿಕಾರಿಗಳ ನೇಮಕ ಮಾಡುವಾಗ ನಮ್ಮ ಗಮನಕ್ಕೆ ತನ್ನಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಎಲ್ಲವನ್ನೂ ಪಕ್ಷದ ಗಮನಕ್ಕೆ ತಂದು ನೇಮಕ ಮಾಡೋದು ಸಾಧ್ಯವಿಲ್ಲ. ಸಚಿವ ಸ್ಥಾನ ವಂಚಿತ ಶಾಸಕರು, ಅಸಮಾಧಾನಿತರು ಸಾಕಷ್ಟು ಮಂದಿ ಇದ್ದಾರೆ. ಅವರನ್ನು ನಿಗಮ ಮಂಡಳಿಗಳ ನೇಮಕಕ್ಕೆ ಪರಿಗಣಿಸಬೇಕಾಗುತ್ತದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಇವರಿಬ್ಬರ ನಡುವಿನ ತಿಕ್ಕಾಟ ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ.
Discussion about this post