ಕನ್ನಡ ಸುದ್ದಿ ವಾಹಿನಿಗಳ ಕಾರ್ಯವೈಖರಿ ಬಗ್ಗೆ ಈಗಾಗಲೇ ಜನರಲ್ಲಿ ಅಸಮಾಧಾನ ಪ್ರಾರಂಭವಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಮುನ್ನಲೆಗೆ ಬರುತ್ತಿದ್ದಂತೆ ವೀಕ್ಷಕರಿಗೆ ಅಸಹನೆ ಹೊರ ಹಾಕಲು ವೇದಿಕೆ ಸಿಕ್ಕಂತಾಗಿದೆ.
ನೆರೆ ಸಂದರ್ಭದಲ್ಲಿ ಸುದ್ದಿ ವಾಚಕಿಯನ್ನೇ ನೀರಿನಲ್ಲಿ ಮುಳುಗಿಸಿ ಟಿವಿ ವಾಹಿನಿಯೊಂದು ರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡಿತ್ತು.
ಈ ನಡುವೆ ಹಲವು ಸುದ್ದಿವಾಹಿನಿಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈ ಕಾರಣದಿಂದ ಕೆಲ ವಾಹಿನಿಗಳು ಬಾಗಿಲು ಹಾಕಿದೆ. ಇನ್ನು ಕೆಲ ವಾಹಿನಿಗಳು ತಮ್ಮ ಟಿ.ಆರ್.ಪಿಯನ್ನು ಏರಿಸಲಾಗದ ಕಾರಣದಿಂದ ಜಾಹೀರಾತು ಸಂಗ್ರಹದಲ್ಲಿ ಸೋತು ಎದುಸಿರು ಬಿಡುತ್ತಿದೆ.
ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಬ್ರೇಕಿಂಗ್ ಭರಾಟೆಗೇನು ಕಮ್ಮಿಯಿಲ್ಲ. ಜನ ಛೀ..ಥೂ ಅನ್ನುತ್ತಿದ್ದರೂ ಬ್ರೇಕಿಂಗ್ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಸುದ್ದಿಯನ್ನು ಕೊಡುವುದಕ್ಕಿಂತ ಹೆಚ್ಚು ನಾವೇ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದು ಎಂದು ಹೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ನೋಡಿದರೆ ಕನ್ನಡ ವಾಹಿನಗಳ ನಡುವೆ ಕೆಟ್ಟ ಸ್ಪರ್ಧೆಯೊಂದು ಪ್ರಾರಂಭವಾಗಿದೆ. ಅನೈತಿಕ ಸಮರದಿಂದಾಗಿ ಸುದ್ದಿಯ ಮೌಲ್ಯಗಳು ಕೂಡಾ ಕುಸಿಯಲಾರಂಭಿಸಿದೆ. ಇದು ಮುಂದೊಂದು ದಿನ ಸಮಾಜಕ್ಕೆ ಮಾರಕವಾದರೂ ಅಚ್ಚರಿ ಇಲ್ಲ. ಯಾಕೆಂದರೆ ಸುದ್ದಿ ಮನೆಗಳು ಇದೀಗ ಉದ್ಯಮವಾಗಿ ಪರಿವರ್ತನೆಯಾಗಿದೆ.
ಇಷ್ಟೆಲ್ಲಾ ಕಥೆ ಯಾಕಂದ್ರೆ, News 18 ಕನ್ನಡ ಮತ್ತು ಪಬ್ಲಿಕ್ ಟಿವಿ ನಡುವೆ ಬ್ರೇಕಿಂಗ್ ಸುದ್ದಿಗಾಗಿ ಜಿದ್ದಾಜಿದ್ದಿ ಶುರುವಾಗಿದೆ. ನಾವೇ ಸುದ್ದಿ ಮೊದಲು ಬ್ರೇಕ್ ಮಾಡಿದ್ದು ಎಂದು ಹೇಳಿಕೊಳ್ಳಲು ವಾಹಿನಿಗಳು ಶುರುವಿಟ್ಟುಕೊಂಡಿದೆ. ಅಷ್ಟಕ್ಕೆ ಸುಮ್ಮನಾಗಿದ್ರೆ ಪರವಾಗಿರಲಿಲ್ಲ. ಬದಲಾಗಿ ನಾವು ಬ್ರೇಕ್ ಮಾಡಿದ ಸುದ್ದಿಯನ್ನು ಬೇರೆಯವರು ಫಾಲೋ ಮಾಡುತ್ತಿದ್ದಾರೆ ಎಂದು ಬೇರೆ ವಾಹಿನಿಗಳನ್ನು ಹಂಗಿಸುವ ಕೆಲಸವೂ ನಡೆಯುತ್ತಿದೆ.
ಇದು ಶುರುವಾಗಿದ್ದು ನ್ಯೂಸ್ 18 ಕಡೆಯಿಂದ, ನಿನ್ನೆ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರದಲ್ಲಿ ಸುದ್ದಿ ಪ್ರಸಾರ ಮಾಡಿದ್ದ ನ್ಯೂಸ್ 18 ಬೇರೆ ವಾಹಿನಿಗಳನ್ನು ಹಂಗಿಸಿತ್ತು.
ಇದರಿಂದ ಕೆರಳಿದ ಪಬ್ಲಿಕ್ ಟಿವಿ, ಇಂದು ಅದಕ್ಕೆ ಟಾಂಗ್ ಕೊಟ್ಟಿದೆ. ಸ್ವಾಮೀಜಿಯೊಬ್ಬರ ಪಲ್ಲಂಗ ಪುರಾಣವನ್ನು ನಾವೇ ಮೊದಲು ಬ್ರೇಕ್ ಮಾಡಿದೆವು, ಬೇರೆಯವರು ಫಾಲೋ ಮಾಡಿದ್ದಾರೆ ಅಂದಿದ್ದಾರೆ.
ಹಿಂದೊಮ್ಮೆ TRP ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಮತ್ತು ಟಿವಿ9 ನಡುವೆ ಸ್ಕ್ರೀನ್ ಮೇಲೆ ಸಮರ ನಡೆದಿತ್ತು.
ಆದರೆ ಒಂದನ್ನು ಜನ ಅರ್ಥ ಮಾಡಿಕೊಳ್ಳಬೇಕು.ಪತ್ರಿಕೋದ್ಯಮದಲ್ಲಿ ಎಲ್ಲಾ ಸುದ್ದಿಗಳು ಎಲ್ಲರಿಗೂ ಸಿಗಬೇಕು ಅಂದಿಲ್ಲ. ಅಥವಾ ಮೊದಲು ಬ್ರೇಕ್ ಆದ ಸುದ್ದಿಯೇ ಸತ್ಯವಾಗಿರಬೇಕಾಗಿಲ್ಲ. ಇತ್ತೀಚೆಗೆ ಆರ್.ಟಿ.ಓ ಅಧಿಕಾರಿಯ ಅಪಘಾತ ವಿಚಾರದಲ್ಲಿ ವಾಹಿನಿಗಳು ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ.
ಏನೇ ಅನೈತಿಕ ಸ್ಪರ್ಧೆಯಿಂದ ಸುದ್ದಿ ಮನೆಯೊಳಗಿನ ಪತ್ರಕರ್ತರ ಕಥೆ ಏನಾಗಿರಬೇಡ ಊಹಿಸಿಕೊಳ್ಳಿ.
Discussion about this post