ಬೆಂಗಳೂರು : ಅದು 1983ನೇ ಇಸವಿ, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದರು. ಹಿಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರಿಗಿಂತ ಡಿಫರೆಂಟ್ ಆಗಿರುವ ಆಡಳಿತ ಕೊಡಬೇಕಾಗಿತ್ತು. ಈ ವೇಳೆ ಹೆಗಡೆಯವರು ಕೈಗೊಂಡ ನಿರ್ಧಾರ ಅಂದ್ರೆ ಅದು ಸರಳತೆ.
ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೋದ ಕಡೆ ಬಂದ ಕಡೆ ಸನ್ಮಾನ ಸ್ವೀಕರಿಸುತ್ತಿದ್ದರು. ಬೆಳ್ಳಿ ಕಿರೀಟ ಬೆಳ್ಳಿ ಗದೆ ಸ್ವೀಕರಿಸುತ್ತಿದ್ದರು. ಮರು ದಿನ ಪತ್ರಿಕೆಗಳಲ್ಲಿ ಇದೇ ಫೋಟೋ ದೊಡ್ಡದಾಗಿ ಬರುತ್ತಿತ್ತು. ಇದರಿಂದ ಜನರಲ್ಲಿ ಗುಂಡೂರಾವ್ ಸರ್ಕಾರದ ಬಗ್ಗೆ ನೆಗೆಟಿವ್ ಅಭಿಪ್ರಾಯ ಮೂಡಿತ್ತು. ಹೀಗಾಗಿ ಇದನ್ನೇ ಬಳಸಿಕೊಂಡ ರಾಮಕೃಷ್ಣ ಹೆಗಡೆ ಕಿರೀಟ – ಗದೆ – ಹಾರ – ತುರಾಯಿ ಸ್ವೀಕರಿಸಬಾರದೆಂಬ ಸಂಪ್ರದಾಯ ಪ್ರಾರಂಭಿಸಿದರು.
ನಂತರ ಸಿಎಂ ಆಗಿ ಬಂದ ಎಸ್.ಆರ್ ಬೊಮ್ಮಾಯಿ ಕೂಡಾ ಹೆಗಡೆ ಅವರ ಕಿರೀಟ – ಗದೆ – ಹಾರ ತುರಾಯಿ ಸ್ವೀಕರಿಸದಿರುವ ಸಂಪ್ರದಾಯ ಮುಂದುವರಿಸಿದ್ದರು. ಆದಾದ ಬಳಿಕ ಬಂದ ಸರ್ಕಾರಗಳು ಕೂಡಾ ಇಂತಹುದೇ ಆದೇಶವನ್ನು ಹೊರಡಿಸಿತ್ತು. ಆದರೆ ಅದು ಆದೇಶವಾಗಿ ಉಳಿದಿತ್ತು ಹೊರಕು ಕಾರ್ಯರೂಪಕ್ಕೆ ಬಂದಿರಲಿಲ್ಲ.
ಇದೀಗ ಬಸವರಾಜ್ ಬೊಮ್ಮಾಯಿಯವರ ಸರ್ಕಾರದಲ್ಲೂ, “ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ – ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ಕಾಣಿಕೆ ನೀಡಬಾರದೆಂದು ಈ ಮೂಲಕ ನಿರ್ದೇಶಿಸಲಾಗಿದೆ. ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದು. ಈ ನಿರ್ದೇಶನವನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಎಲ್ಲ ಸಂಸ್ಥೆಗಳು ತಮ್ಮ ಆಧೀನದಲ್ಲಿ ಬರುವ ಎಲ್ಲ ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಲಾಗಿದೆ” ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಮೇಲ್ನೋಟಕ್ಕೆ ತಂದೆ ಎಸ್.ಆರ್. ಬೊಮ್ಮಾಯಿ ಹಾದಿಯಲ್ಲೇ ಪುತ್ರ ಬಸವರಾಜ್ ಬೊಮ್ಮಾಯಿ ನಡೆಯುತ್ತಿದ್ದಾರೆ ಅನ್ನಿಸುತ್ತಿದೆ. ಆದರೆ ಈ ಆದೇಶ ಕೇವಲ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಲಿದೆ ಹೊರತು, ಸಚಿವರು, ಶಾಸಕರು ಬಿಡಿ, ಮುಖ್ಯಮಂತ್ರಿಗಳಿಗೂ ಅನ್ವಯವಾಗುವುದು ಅನುಮಾನ. ಈಗಾಗಲೇ ಬೊಮ್ಮಾಯಿಯವರೇ ದೇವೇಗೌಡರು, ಎಸ್ ಎಂ ಕೃಷ್ಣ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಬಂದಿದ್ದಾರೆ. ಇನ್ನು ಮಂತ್ರಿಗಳು ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಈ ವೇಳೆ ಹಾರ ತುರಾಯಿ ಹಣ್ಣು ಹಂಪಲು ಗಳನ್ನು ಸ್ವೀಕರಿಸುತ್ತಿದ್ದಾರೆ. ಇವೆಲ್ಲಾ ಖಾಸಗಿ ಕಾರ್ಯಕ್ರಮ ಎಂದು ಸಮಜಾಯಿಷಿ ಕೊಡಬೇಡಿ, ಸರಳತೆ ಅನ್ನುವುದು ಸರ್ಕಾರದ ಕಾರ್ಯಕ್ರಮಕ್ಕೆ ಸೀಮಿತವಾದರೆ ಅದು ಹಾಸ್ಯಾಸ್ಪದ.
Discussion about this post