ಬೆಂಗಳೂರು : ಮೇಲೆ ಕೆಳಗೆ ನಮ್ಮದೇ ಸರ್ಕಾರ ಎಂದು ಬೀಗಿದ್ದ ಬಿಜೆಪಿ ನಾಯಕರು, ಜನರ ಕೆಲಸ ಸಿಕ್ಕಾಪಟ್ಟೆ ಸಲೀಸು ಎಂದು ಭರವಸೆ ಕೊಟ್ಟಿದ್ದರು. ಆದರೆ ಕೊರೋನಾ ವಿಚಾರದಲ್ಲಿ ಹಾಗೇ ಆಗಲೇ ಇಲ್ಲ. ಕರ್ನಾಟಕದ ಮಟ್ಟಿಗೆ ಕೇಂದ್ರ ಸರ್ಕಾರ ಹತ್ತು ಹಲವು ಸಲ ಮಲತಾಯಿ ಧೋರಣೆಯನ್ನು ತಳೆದಿದೆ.ಇತ್ತೀಚೆಗೆ ಆಕ್ಸಿಜನ್ ವಿಚಾರದಲ್ಲೂ ಮಾಡಿದ್ದು ಅದೇ. ರಾಜ್ಯಕ್ಕೆ ನ್ಯಾಯ ಕೊಟ್ಟ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಈ ನಡುವೆ ರಾಜ್ಯದಲ್ಲಿ ಕೊರೋನಾ ನಿರ್ವಹಣೆ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಸಾರಿ ಸಾರಿ ಹೇಳುತ್ತಿವೆ. ಮಾತ್ರವಲ್ಲದೆ ರಾಜ್ಯ ಸರ್ಕಾರದ ಕೊರೋನಾ ನಿರ್ವಹಣೆ ವಿಚಾರದಲ್ಲಿ ಜನರಿಗೆ ಆಕ್ರೋಶವಿದೆ. ಬಿಜೆಪಿ ಕಾರ್ಯಕರ್ತರೇ ರಾಜ್ಯ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದ್ದಾರೆ ಅಂದ್ರೆ ಪರಿಸ್ಥಿತಿ ಹೇಗಿರಬಹುದು.
ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸವಾಗುತ್ತಿಲ್ಲ ಅನ್ನುವ ಆಕ್ರೋಶದ ಬಿಸಿ ಇದೀಗ ಕೇಂದ್ರದ ನಾಯಕರಿಗೂ ತಟ್ಟಿದೆ. ಹೀಗಾಗಿ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ದೆಹಲಿಯಿಂದಲೇ ಕೂತು ಆನ್ ಲೈನ್ ಮೂಲಕ ಕಾರ್ಯಕರ್ತರೊಂದಿಗೆ ಸಂಧಾನ ನಡೆಸುತ್ತಿದ್ದ ಅವರು ಇದೀಗ ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಮಂಗಳವಾರವೇ ಬೆಂಗಳೂರಿಗೆ ಆಗಮಿಸಿರುವ ಅವರು ಬುಧವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದಾದ ಬಳಿಕ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಆರ್.ಅಶೋಕ್, ಕೆ.ಸುಧಾಕರ್, ಎಸ್.ಟಿ. ಸೋಮಶೇಖರ್, ಸೇರಿ ಪ್ರಮುಖ ನಾಯಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ.
ಗುರುವಾರ ಪಕ್ಷದ ಕಚೇರಿಯಿಂದಲೇ ಜಿಲ್ಲಾವಾರು ಮುಖಂಡರೊಂದಿಗೆ ಸಭೆ ನಡೆಸಿ ಸೇವೆಯೇ ಸಂಘಟನೆ ಅಡಿಯಲ್ಲಿ ಹಮ್ಮಿಕೊಂಡಿರುವ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಆಗಿಲ್ಲ ಎಂದು ಸಂತೋಷ್ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮತ್ತೆ ‘ಸೇವೆಯೇ ಸಂಘಟನೆ’ ಕಾರ್ಯಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಬಿಎಲ್ ಸಂತೋಷ್, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ದೇ ಸರ್ಕಾರ ಇರೋವಾಗ ಕೊರೋನಾ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿದ್ರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಈವರೆಗಿನ ಕೆಲಸಗಳು ಸಮಾಧಾನ ತರುವಂತಿಲ್ಲ. ಪ್ರತಿಪಕ್ಷಗಳ ಅಪಪ್ರಚಾರಕ್ಕೆ, ಸುಳ್ಳು ಆರೋಪಕ್ಕೆ ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಮಟ್ಟದಲ್ಲಿ ಉತ್ತರಿಸುವ ಕೆಲಸವಾಗುತ್ತಿಲ್ಲ. ಕೊರೋನಾ ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಏನೇನು ಕೆಲಸ ಮಾಡುತ್ತಿದೆ ಅನ್ನುವುದನ್ನು ಜನರಿಗೆ ವಿವರಿಸುವ ಕೆಲಸವಾಗಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
Discussion about this post