ಭಾಸ್ಕರ ರಾವ್ ಐಪಿಎಸ್, ಸದಾ ನಗು ಮುಖದ ವ್ಯಕ್ತಿತ್ವ.ಎಂದಿಗೂ ಸಿಟ್ಟಾದವರಲ್ಲ. ಐಪಿಎಸ್ ಅಂದರೆ ಕಣ್ಣ ಮುಂದೆ ಬರುವ ಖಡಕ್ ಲುಕ್ ಕೂಡಾ ಇಲ್ಲ. ಹಾಗಂತ ಖಾಕಿ ಕೆಲಸದಲ್ಲಿ ಎಂದಿಗೂ ಒಪ್ಪಂದ ಮಾಡಿಕೊಂಡವರಲ್ಲ.
ಭಾಸ್ಕರ್ ರಾವ್ KSRPಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಹಲವಾರು ಸಿಬ್ಬಂದಿ ನಿವೃತ್ತಿಯಾಗಲೂ ಇನ್ನು ನಾಲ್ಕು ಗಂಟೆ ಇದೆ ಅನ್ನುವಷ್ಟರಲ್ಲಿ ಅವರಿಗೆ ಬಡ್ತಿ ನೀಡಿ ಬೆನ್ನು ತಟ್ಟಿದ್ದರು. ಇದು ಭಾಸ್ಕರ್ ರಾವ್ ಅವರ ಕಾರ್ಯವೈಖರಿಗೊಂದು ಉದಾಹರಣೆ.
ಭಾಸ್ಕರ್ ರಾವ್ ಕನ್ನಡಿಗರಾದರೂ ಬೆಳದದ್ದು ಬಿಹಾರದಲ್ಲಿ. ಅವರ ತಂದೆ ಸರ್.ಎಂ.ವಿಶ್ವೇಶ್ವರಯ್ಯ ಜೊತೆಗೆ ಸಹಾಯಕ ಇಂಜಿನಿಯರ್ ಆಗಿದ್ದರು. 1957-58ನೇ ಇಸವಿಯಲ್ಲಿ ಕೆಲಸದ ನಿಮಿತ್ತ ಬಿಹಾರಕ್ಕೆ ಹೋದ ಕುಟುಂಬ ಅಲ್ಲಿಯೇ ನೆಲೆಸಿತು.
ಬಾಲ್ಯದಿಂದಲೂ ಭಾಸ್ಕರ್ ರಾವ್ ಅವರು ಓದಿನಲ್ಲಿ ತುಂಬಾ ಹಿಂದಿದ್ದರು. ಹೀಗಾಗಿ ನಿತ್ಯ ತಂದೆಯಿಂದ ಬೈಸಿಕೊಳ್ಳುವುದೇ ಆಗಿತ್ತು.
ಇದೇ ಸಂದರ್ಭದಲ್ಲಿ ಬಿಹಾರದಲ್ಲಿ ನಡೆಯುತ್ತಿದ್ದ ಶೋಷಣೆ, ಅಪರಾಧ ಚಟುವಟಿಕೆಗಳನ್ನ ನೋಡಿ ತಾವೂ ಪೊಲೀಸ್ ಆಗಬೇಕು. ಇವೆಲ್ಲವನ್ನೂ ಮಟ್ಟ ಹಾಕಬೇಕು ಎಂದು ಕನಸು ಕಂಡಿದ್ದರು. ಆದರೆ ತಲೆಗೆ ವಿದ್ಯೆ ಹತ್ತದ ಕಾರಣ ಕನಸು ಕಾಡುವುದಕ್ಕೆ ಸೀಮಿತವಾಗಿತ್ತು.
ಹಾಗೋ ಹಿಗೋ ಎಸ್ಎಸ್ಎಲ್ಸಿ ಪಾಸು ಮಾಡುವ ಹೊತ್ತಿಗೆ ಸಾಧಿಸಬೇಕು ಅನ್ನುವ ಛಲ ಹುಟ್ಟಿಕೊಂಡಿತ್ತು. ಹೀಗಾಗಿ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. 1982ರಲ್ಲಿ ಸೆಂಟ್ ಜೊಸೆಫ್ ಕಾಲೇಜಿನಲ್ಲಿ ಕಲಾ ವಿಭಾಗದ ವಿದ್ಯಾರ್ಥಿಯಾಗಿ ಸೇರಿಕೊಂಡರು.ನಂತರ ನ್ಯಾಷನಲ್ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದರು.
ಅಷ್ಟು ಹೊತ್ತಿಗೆ ಸೇನೆ ಸೇರುವ ಅವಕಾಶ ಸಿಕ್ಕಿತು. ಭಾರತ – ಶ್ರೀಲಂಕಾ ನಡುವಿನ ಸೇನಾ ಕಾರ್ಯಚರಣೆಯಲ್ಲಿ ಪಾಲ್ಗೊಂಡರು. ಆದರೆ ಯಾಕೋ ಸೇನೆ ಅವರಿಗೆ ಸರಿ ಹೊಂದಿ ಬರಲಿಲ್ಲ. ಹೀಗಾಗಿ ಸೇನೆಗೆ ರಾಜೀನಾಮೆ ನೀಡಿ ಮತ್ತೆ ತನ್ನ ಹಳೆಯ ಕನಸುಗಳನ್ನು ಸಾಕಾರಗೊಳಿಸಲು ನಾಗರಿಕ ಸೇವೆಯ ಪರೀಕ್ಷೆಗಳಿಗೆ ಸಿದ್ದರಾದರು. ಆದರೆ ಅದು ಕಬ್ಬಿಣ್ಣದ ಕಡಲೆಯಾಗಿ ಹೋಯ್ತು. ಯಾಕೋ ಇದು ಎಡವಟ್ಟು ಅನ್ನುವ ಪರಿಸ್ಥಿತಿ ನಿರ್ಮಾಣವಾಯ್ತು. ಕೈಯಲ್ಲಿ ಕಾಸು ಕರಗಿತು. ಜೊತೆಗೆ ಕೆಲಸಬೇರೆ ಇರಲಿಲ್ಲ. ಹೀಗಾಗಿ ಯಾವುದೂ ಬೇಡ ಎಂದು NKRV ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಗೆ ಸೇರಿಕೊಂಡರು. ಈಗ ಅವರಿಗೆ ಸಿಕ್ಕಿದ್ದು 600 ರೂಪಾಯಿ ಸಂಬಳ.
ಹಾಗಂತ ಪೊಲೀಸ್ ಅಧಿಕಾರಿಯಾಗುವ ಕನಸು ಸತ್ತಿರಲಿಲ್ಲ. ಹೀಗಾಗಿ ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಭಾಗದಲ್ಲಿ ಅಭ್ಯಾಸ ನಡೆಸಿದರು. ಈ ವೇಳೆ ಅವರಿಗೆ ಅವರೇ ಗುರುವಾಗಿದ್ದರು.
ಕೊನೆಗೊಂದು ದಿನ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದವರು ಸಾಧಿಸಲೇಬೇಕು ಎಂದು ನಿಂತವ ಗುರಿ ಮುಟ್ಟುವುದು ಖಚಿತ ಅನ್ನುವಂತೆ 1990ರಲ್ಲಿ ನಾಗರಿಕ ಸೇವೆಯನ್ನು ಪಾಸು ಮಾಡಿದರು. ಭಾರತೀಯ ವಿದೇಶಿ ಸೇವೆ ಮಾಡುವ (IFS) ಅವಕಾಶ ಸಿಕ್ಕಿತ್ತು. ಆದರೆ ಅವರು ಬಯಸಿದ್ದು IPS.
ಅದೃಷ್ಟ ಅನ್ನುವಂತೆ ಕರ್ನಾಟಕ ಕೇಡರ್ ಸಿಕ್ತು. ಮತ್ತೆ ಹಿಂತಿರುಗಿ ನೋಡಲಿಲ್ಲ. ತನ್ನದೇ ಶೈಲಿಯಲ್ಲಿ ಕೆಲಸ ಮಾಡುತ್ತಾ ಸಾಗಿದರು. ಐಪಿಎಸ್ ಅಂದ ಮೇಲೆ ರಾಜಕೀಯ, ರಾಜಕಾರಣದ ವಿಚಾರಗಳು ಹೊಡೆತ ಕೊಡುವುದು ಸಾಮಾನ್ಯ. ಹಾಗಂತ ಅವರು ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ.
ಭಾಸ್ಕರ್ ರಾವ್ ಅವರಿಗೆ ಒಂದಿಷ್ಟು ಸಾಹಿತ್ಯ ಸಂಸ್ಕೃತಿ ಹುಚ್ಚು ಇರುವ ಕಾರಣ ಜನ ಸಾಮಾನ್ಯರೊಂದಿಗೆ ಸುಲಭವಾಗಿ ಬೆರೆಯುತ್ತಾರೆ ಅನ್ನುವ ಗಮನಾರ್ಹ.
Discussion about this post