ಬೆಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಶ್ವಾನಗಳ ಕಾಟ ನಿಯಂತ್ರಣಕ್ಕೆ ಮುಂದಾಗಿರುವ ಪಾಲಿಕೆ ನಾಯಿಗಳನ್ನು ಸಾಕಾಬೇಕಾದ್ರೆ ಪರವಾನಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು 15 ದಿನಗಳಲ್ಲಿ ಅನುಮತಿ ಸಿಗುವ ಸಾಧ್ಯತೆಗಳಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯಿಂದ 5 ಬಾರಿ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಶುಲ್ಕ ನಿಗದಿಯಾಗಲಿದೆ. ಈಗಿನ ಪ್ರಸ್ತಾವನೆ ಪ್ರಕಾರ ಎರಡು ರೀತಿಯ ಲೈಸೆನ್ಸ್ ನೀಡಲು ಪಾಲಿಕೆ ಚಿಂತನೆ ನಡೆಸಿದ್ದು, ಮನೆಯಲ್ಲೇ ನಾಯಿ ಸಾಕುವುದಾದ್ರೆ ಒಂದು ಬಾರಿ ಪರವಾನಿಗೆ ಪಡೆಯಬೇಕು, ನಾಯಿಗಳನ್ನು ಸಾಕಿ ಮರಿ ಮಾಡಿ ಮಾರಾಟ ಮಾಡುವುದಾದ್ರೆ ಪ್ರತೀ ವರ್ಷ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ‘ಪೆಟ್ ಡಾಗ್’ ಹಾಗೂ ‘ಬ್ರೀಡ್ ಲೈಸೆನ್ಸ್’ ಅನ್ನು ಪರಿಚಯಿಸಲಾಗುತ್ತಿದೆ.
‘ಪೆಟ್ ಡಾಗ್’ ಲೈಸೆನ್ಸಿಂಗ್ ಅನ್ನು ‘ಅನಿಮಲ್ ವೆಲ್ ಫೇರ್ ಇಂಡಿಯಾ’ ವತಿಯಿಂದ ಪಡೆಯಬೇಕು, ನಾಯಿಗಳ ಸಂತಾನೋತ್ಪತ್ತಿ ಕೇಂದ್ರ ನಡೆಸಬೇಕಾದ್ರೆ ಪೆಟ್ ಪೇರೆಂಟ್ಸ್ ಅನ್ನೋ ಲೈಸೆನ್ಸ್ ಪಡೆಯಬೇಕು. ಇನ್ನು ಲೈಸೆನ್ಸ್ ಪಡೆಯುವ ವೇಳೆ ಅನೇಕ ಷರತ್ತುಗಳನ್ನು ವಿಧಿಸಲಾಗುತ್ತದೆ. ಪ್ರಮುಖವಾಗಿ ನಾಯಿಗಳಿಗೆ ಲಸಿಕೆ ಮತ್ತು ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು, ನಾಯಿಗಳು ತಪ್ಪಿಸಿಕೊಂಡು ಹೋಗದಂತೆ ದೇಹದಲ್ಲಿ ಮೈಕ್ರೋ ಚಿಪ್ ಅಳವಡಿಸಬೇಕು, ನಾಯಿಗಳ ಪತ್ತೆಗಾಗಿ ಫೇಸ್ ರೆಕಗ್ನೇಷನ್ ಮಾಡಿಸಬೇಕು. ನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜಿಸಿದರೆ ಮಾಲೀಕರೆ ಅದನ್ನು ಸ್ವಚ್ಛಗೊಳಿಸಬೇಕು. ಇನ್ನು ನಾಯಿಗಳ ಬ್ರೀಡಿಂಗ್ ಲೈಸೆನ್ಸ್ ಪಡೆಯುವ ವೇಳೆಯೂ ಹಲವು ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗಿದೆ.
ಇನ್ನು ಒಂದು ಪ್ಲ್ಯಾಟ್ ಗೆ ಒಂದೇ ನಾಯಿ ಅನ್ನುವ ನಿಯಮ ಜಾರಿ ತರುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ.
Discussion about this post