ಬೆಂಗಳೂರು : ರಾಜೀನಾಮೆ ಕುರಿತಂತೆ ಹೈಕಮಾಂಡ್ ಆದೇಶಕ್ಕೆ ಕಾಯುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ, ಇದೀಗ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲು ಮುಂದಾಗಿದ್ದಾರೆ. ನಿನ್ನೆ ಕ್ಯಾಬಿನೆಟ್ ಸಭೆಯಲ್ಲಿ ಶಿವಮೊಗ್ಗ ಭರ್ಜರಿ ಕೊಡುಗೆಗಳು ಘೋಷಿಸಿದ್ದ ಯಡಿಯೂರಪ್ಪ ಇಂದು ಬೆಂಗಳೂರು ಸಿಟಿ ರೌಂಡ್ಸ್ ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಹಾಗೂ ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಈ ವೇಳೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ|| ಸಿ.ಎನ್.ಅಶ್ವತ್ಥ್ ನಾರಾಯಣ್, ಸಚಿವರಾದ ಆರ್.ಅಶೋಕ್, ಬಿ.ಎ.ಬಸವರಾಜ, ವಿ.ಸೋಮಣ್ಣ, ಅರವಿಂದ ಲಿಂಬಾವಳಿ, ಬಿ.ಬಿ.ಎಂ.ಪಿ ಆಯುಕ್ತ ಗೌರವ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.
ಆನಂದ್ ರಾವ್ ಸರ್ಕಲ್ನಿಂದ ಪ್ರಾರಂಭವಾದ ಅವರ ಸಿಟಿ ರೌಂಡ್ಸ್ ಗಾಂಧಿ ನಗರ, ಧನ್ವಂತರಿ ರಸ್ತೆ, ಮೆಜೆಸ್ಟಿಕ್, ನಾಯಂಡಹಳ್ಳಿ ಜಂಕ್ಷನ್, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಮೈಸೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್, ತುಮಕೂರು ರಸ್ತೆ, ಸಿ ವಿ ರಾಮನ್ ನಗರ ರಸ್ತೆ, ಮೇಕ್ರಿ ಸರ್ಕಲ್, ಹೈ ಗ್ರೌಂಡ್ ಪ್ರದೇಶ, ಕಮರ್ಶಿಯಲ್ ಸ್ಟ್ರೀಟ್, ಇಂದಿರಾನಗರ, ಬ್ರಿಗೇಡ್ ರಸ್ತೆ, ರಿಚ್ಮಂಡ್ ಸರ್ಕಲ್, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಅವರು ಅಭಿವೃದ್ಧಿ ಕಾಮಗಾರಿಗಳನ್ನ ವೀಕ್ಷಿಸಲಿದ್ದಾರೆ. ಅಂತಿಮವಾಗಿ ಅವರು ಕಸ್ತೂರಬಾ ರಸ್ತೆ, ಮಾಣಿಕ್ ಶಾ ಸ್ಕ್ವೆರ್, ಪೊಲೀಸ್ ಕಮಿಷನರ್ ರಸ್ತೆ, ರಾಜಭವನ ರಸ್ತೆ ಮೂಲಕ ತಮ್ಮ ಗೃಹ ಕಚೇರಿ ಕೃಷ್ಣಾಗೆ ಹಿಂತಿರುಗಲಿದ್ದಾರೆ..
ಇನ್ನು ತಮ್ಮ ರಾಜೀನಾಮೆ ದಿನ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ನಿಗದಿಯಾಗಿದ್ದ ಶಿವಮೊಗ್ಗ ಹಾಗೂ ಕಾರವಾರದ ಪ್ರವಾಸವನ್ನು ರದ್ದು ಮಾಡಿದ್ದಾರೆ. ಜೊತೆಗೆ ಶಾಸಕಾಂಗ ಪಕ್ಷದ ಸಭೆ ಹಾಗೂ ಶಾಸಕರಿಗೆ ಭೋಜನ ಕೂಟವನ್ನೂ ರದ್ದುಗೊಳಿಸಿದ್ದಾರೆ.
ಇನ್ನೆರೆಡು ದಿನ ಕಳೆದರೆ ರಾಜ್ಯ ಬಿಜೆಪಿ ಬೆಳವಣಿಗೆಯ ಸ್ಪಷ್ಟ ಚಿತ್ರಣ ಸಿಗಲಿದೆ.
Discussion about this post