ಬೆಳಗಾವಿ : ಅಧಿಕಾರಿಕ್ಕೆ ಬರೋ ತನಕ ಎಲ್ಲಾ ಪಕ್ಷಗಳು ನಾವು ರೈತ ಪರ ಅಂತಾರೆ. ವೇದಿಕೆಯಲ್ಲಿ ಅವಕಾಶ ಸಿಕ್ರಿ ಹಸಿರು ಶಾಲು ಬೀಸುತ್ತಾರೆ. ಇದಾದ ಬಳಿಕ ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ. ಇದು ಸಂಪ್ರದಾಯ ಅನ್ನುವಂತೆ ನಡೆದುಕೊಂಡು ಬಂದಿದೆ.ಬಂಡವಾಳಶಾಹಿಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ರೈತರ ಭೂಮಿಯನ್ನು ಮುಕ್ಕಾಲು ಪೈಸೆಗೆ ಖರೀದಿಸಿ ಅನ್ಯಾಯವೆಸಗಲಾಗುತ್ತದೆ. ಇಂತಹ ಯೋಜನೆಗಳಿಗೆ ಎಂದಾದರೂ ರಾಜಕಾರಣಿಗಳ, ಮಂತ್ರಿಗಳ, ಶ್ರೀಮಂರ ಭೂಮಿ ಹೋದ ಉದಾಹರಣೆಗಳಿದೆಯೇ ಖಂಡಿತಾ ಇಲ್ಲ.
ಬೆಳಗಾವಿಯಲ್ಲೂ ಆಗಿರುವುದು ಇದೇ. ಬೈಪಾಸ್ ರಸ್ತೆಗೆ ಭೂಮಿ ವಶಪಡಿಸಿಕೊಳ್ಳುವಾಗ ಸರಿಯಾದ ಪರಿಹಾರ ಕೊಟ್ಟಿಲ್ಲ. ಭೂಮಿ ವಶಪಡಿಸಿಕೊಳ್ಳುವಾಗ್ಲೂ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ಭೂಮಿ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ರೈತರ ಮೇಲೆ ಬೊಮ್ಮಾಯಿ ಸರ್ಕಾರ ದೌರ್ಜನ್ಯ ಎಸಗಿದೆ.
ಪ್ರತಿಭಟನೆ ಪ್ರಾರಂಭಿಸಿರುವ ರೈತರನ್ನು ಕೂತು ಮಾತನಾಡಿಸಬೇಕಾದ ಜಿಲ್ಲಾಧಿಕಾರಿಗಳು ಸೌಜನ್ಯವಿಲ್ಲದಂತೆ, ನಾವು ಕಾಮಗಾರಿ ನಡೆಸುತ್ತೇವೆ, ಬೇಕಿದ್ರೆ ನೀವು ಕೋರ್ಟ್ ಗೆ ಹೋಗಿ ಅಂದಿದ್ದಾರೆ. ಇಂತಹ ಜಿಲ್ಲಾಧಿಕಾರಿಗಳನ್ನು ನಿಯಂತ್ರಿಸಲು ಬೊಮ್ಮಾಯಿಯವರಿಗೆ ಸಾಧ್ಯವಾಗಿಲ್ಲ ಅಂದ್ರೆ ಇದ್ಯಾವ ರೈತ ಪರ ಸರ್ಕಾರ. ಅಲ್ಲಿಗೆ ಉತ್ತರ ಪ್ರದೇಶದ ಲಖಿಂಪುರ, ಪಂಜಾಬ್ ನ ಫಿರೋಜ್ ಪುರ ದ ಬಳಿಕ ಕರ್ನಾಟಕ ಬೆಳಗಾವಿಯಲ್ಲಿ ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆದಂತಾಗಿದೆ.
ಬೆಳಗಾವಿ ಮಚ್ಚೆ – ಹಲಗಾ ಗ್ರಾಮದಲ್ಲಿ ಬೈಪಾಸ್ ರಸ್ತೆಗೆ ಈ ಹಿಂದಿನಿಂದಲೂ ವಿರೋಧವಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಯಾವಾಗ ತಡೆಯಾಜ್ಞೆ ತೆರವಾಯ್ತೋ ಜಿಲ್ಲಾಡಳಿತ ಕಾಮಗಾರಿ ಪ್ರಾರಂಭಿಸಿದೆ. ಆದರೆ ಕಾಮಗಾರಿ ನಡೆಸುವ ಜಾಗದಲ್ಲಿ ಕಟಾವಿಗೆ ಬಂದು ನಿಂತ ಕಬ್ಬಿನ ಪೈರಿದೆ. ಅದ್ಯಾವುದನ್ನು ಲೆಕ್ಕಿಸದೆ ಕಾಮಗಾರಿ ನಡೆಸುವುದು ಯಾವ ನ್ಯಾಯ ಅನ್ನುವುದು ರೈತರ ಪ್ರಶ್ನೆ. ಇನ್ನು ಪರಿಹಾರದಲ್ಲೂ ಅಧಿಕಾರಿಗಳ ಕಮಿಷನ್ ದಂಧೆಯ ಆರೋಪ ಕೇಳಿ ಬಂದಿದೆ. ರೈತರ ಭೂಮಿಗೆ 57 ಲಕ್ಷ ಪರಿಹಾರ ನೀಡಲು 11 ಲಕ್ಷ ಕಮಿಷನ್ ಬೇಕು ಅಧಿಕಾರಿಗಳು ಹೇಳುತ್ತಿದ್ದಾರೆ ಅಂತಾ ರೈತರೇ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಒಂಬತ್ತೂವರೆ ಕಿಮೀ ಉದ್ದದ ರಸ್ತೆಗೆ 110 ಎಕರೆ ಜಮೀನು ಸ್ವಾಧೀನ ಮಾಡಲಾಗಿದ್ದು, ಒಟ್ಟು 825ಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡಬೇಕಾಗಿದೆ. ಈ ಪೈಕಿ 27 ಕೋಟಿ ಪರಿಹಾರ ನೀಡಲಾಗಿದ್ದು 100ಕ್ಕೂ ಹೆಚ್ಚು ರೈತರಿಗೆ ಇನ್ನೂ ಪರಿಹಾರ ಹಣ ತಲುಪಿಲ್ಲ. ಕೆಲವರು ಪರಿಹಾರ ಹಣ ಪಡೆಯಲು ನಿರಾಕರಿಸಿದ್ದಾರೆ. ಮತ್ತೆ ಕೆಲವರು ಹೆಚ್ಚು ಪರಿಹಾರಬೇಕೆಂದು ಕೇಳಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳನ್ನು ತಲೆ ಮೇಲೆ ಹೊತ್ತುಕೊಂಡಿರುವ ಜಿಲ್ಲಾಡಳಿತ ಬಲವಂತವಾಗಿ ರಸ್ತೆ ನಿರ್ಮಾಣಕ್ಕೆ ಹೊರಟಿದೆ ಅಂದ್ರೆ ಯಾವ ನ್ಯಾಯ.
ರೈತರನ್ನು ವಿಶ್ವಾಸಕ್ಕೆ ಪಡೆದು, ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರವನ್ನು ಕೊಟ್ಟು ಕಾಮಗಾರಿ ನಡೆಸಿದರೆ ಇದು ರೈತ ಪರ ಸರ್ಕಾರ ಅನ್ನಬಹುದು.
Discussion about this post