ಕನ್ನಡ ಹೋರಾಟ ಅಂದರೆ ಅದಕ್ಕೊಂದು ಇತಿಹಾಸವಿದೆ.ಕನ್ನಡದ ಹೆಸರಿನಲ್ಲಿ ನಡೆದ ಅನೇಕ ಹೋರಾಟಗಳು ನೆಟ್ಟ ಮೈಲುಗಲ್ಲುಗಳನ್ನು ನೆನದರೆ ರೋಮಾಂಚನವಾಗುತ್ತದೆ.ಅಂದು ಹೋರಾಟಗಾರರಲ್ಲಿ ಇದ್ದ ಒಗ್ಗಟ್ಟು ಹೋರಾಟಗಳನ್ನು ಯಶಸ್ವುಗೊಳಿಸಿತ್ತು.
ಆದರೆ ಈಗ ನೂರಾರು ಕನ್ನಡ ಸಂಘಟನೆಗಳು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ. ಆ ಬಣ ಈ ಬಣ ಎಂದು ಕಿತ್ತಾಟ ಬೇರೆ ಕೇಡು. ಕನ್ನಡಕ್ಕಾಗಿ ಹೋರಾಟ ಮಾಡಬೇಕಾಗಿರುವ ಮಂದಿ ತಪ್ಪು ಮಾಡಿ ಪೊಲೀಸ್ ಅಧಿಕಾರಿ ಅಮಾನತುಗೊಂಡರೆ, ಅವರ ಪರವಾಗಿ ಪ್ರತಿಭಟನೆ ಮಾಡುತ್ತಾರೆ.
ರಾಜಕಾರಣಿಯೊಬ್ಬ ಕೋಟಿ ಕೋಟಿ ತಿಂದು ಜೈಲು ಸೇರಿದರೆ ಪ್ರತಿಭಟನೆ ಮಾಡುತ್ತಾರೆ. ಒಂದೇ ಜಾತಿಯನ್ನು ಟಾರ್ಗೇಟ್ ಮಾಡಿ ಕನ್ನಡದ ಹೆಸರಿನಲ್ಲಿ ಹೋರಾಟ ಮಾಡಿ ಬೋರ್ಡ್ ಕಿತ್ತು ಹಾಕುತ್ತಾರೆ.
ಹಾಗಾದರೆ ಹೀಗೆ ನಡೆಯುತ್ತಿರುವ ಹೋರಾಟಗಳು ಸರಿ ಇಲ್ಲವೇ. ಖಂಡಿತಾ ಅಲ್ಲ. ಕನ್ನಡದ ಪರವಾಗಿ ನಿಜವಾದ ಹೋರಾಟ ನಡೆದರೆ ಅದನ್ನು ತಪ್ಪು ಅನ್ನುವುದು ಅಪರಾಧ. ರೂಪೇಶ್ ರಾಜಣ್ಣ ಅನ್ನುವವರು ಕನ್ನಡದ ಬೋರ್ಡ್ ಪರವಾಗಿ ನಡೆಸುವ ಹೋರಾಟವನ್ನು ಮೆಚ್ಚಲೇಬೇಕು.
ಆದರೆ ಇಂದು ಬಿಬಿಎಂಪಿಗೆ ಮೇಯರ್ ಆಗಿ ಬಿಜೆಪಿ ಗೌತಮ್ ಕುಮಾರ್ ಜೈನ್ ಆಯ್ಕೆಯಾಗುತ್ತಿದ್ದಂತೆ ಕನ್ನಡದ ಹೆಸರಿನಲ್ಲಿ ಪ್ರತಿಭಟನೆಗೆ ಇಳಿದವರಿಗೆ ನಾಚಿಕೆಯಾಗಬೇಕು. ಅವರೊಬ್ಬರು ಜೈನ್ ಅನ್ನುವ ಕಾರಣಕ್ಕೆ ಅವರನ್ನು ಮಾರ್ವಾಡಿ ಎಂದು ಪರಿಗಣಿಸಿದ್ದು ದುರಂತವೇ ಸರಿ.
ಗೌತಮ್ ಕುಮಾರ್ ಅವರು ಬಳ್ಳಾರಿಯ ಸಿರಗುಪ್ಪದಲ್ಲಿ ಹುಟ್ಟಿದವರು, ಅವರೊಬ್ಬರು ಪಕ್ಕಾ ಕನ್ನಡಿಗರು. ಅವರೇನು ರಾಜಸ್ಥಾನ, ಗುಜರಾತ್ ನಿಂದ ವಲಸೆ ಬಂದು ಪಾಲಿಕೆ ಸದಸ್ಯರಾದವರಲ್ಲ. ಆದರೂ ಗೌತಮ್ ಕುಮಾರ್ ಮೇಲೆ ಕನ್ನಡ ಸಂಘಟನೆಗಳು ಮತ್ತು ಕೆಲ ಸ್ವಯಂ ಘೋಷಿತ ಹೋರಾಟಗಾರರು we want Kannadiga mayor ಎಂದು ಹೋರಾಟ ಶುರುವಿಟ್ಟುಕೊಂಡಿದ್ದು ವಿಪರ್ಯಾಸವೇ ಸರಿ.
ನಿಜಕ್ಕೂ ಇವರಿಗೆ ಬಿಜೆಪಿ ಮೇಲೆ ಸಿಟ್ಟಿಲ್ಲ ಅನ್ನುವುದಾಗಿದ್ದರೆ ಅವತ್ತು ಮಂಜುನಾಥ ರೆಡ್ಡಿ ಮೇಯರ್ ಅದ್ರಲ್ಲ ಅವತ್ತು ಕನ್ನಡಿಗ ಮೇಯರ್ ಬೇಕು ಅನ್ನಬೇಕಿತ್ತು. ರೆಡ್ಡಿ ಅಂದ್ರೆ ಅವರು ತೆಲುಗು ಮಂದಿ ತಾನೇ. ಸಂಪತ್ ರಾಜ್ ಅವರ ಮೂಲವನ್ನು ಯಾರಾದ್ರೂ ಕೆದಕಿದ್ದಾರೆಯೇ ಇಲ್ಲ ತಾನೇ. ಹೋಗ್ಲಿ ಶಾಸಕರಾದ ಹ್ಯಾರಿಸ್, ಕೆಜೆ ಜಾರ್ಜ್ ವಿರುದ್ಧ ಇದೇ ಹೋರಾಟಗಾರರು ದನಿ ಎತ್ತಬೇಕಿತ್ತು. ಅದೆಲ್ಲಾ ಈ ಹೋರಾಟಗಾರರಿಗೆ ಗೊತ್ತೇ ಇರಲಿಲ್ಲ.
ಹಾಗಂತ ದನಿ ಎತ್ತುವ ಅಗತ್ಯವೂ ಇರಲಿಲ್ಲ. ಅವರು ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು ಅನ್ನುವ ಕಾರಣಕ್ಕೆ ಸುಮ್ಮನಿದ್ದರು.
ಹೀಗೆ ಆದರೆ ಮುಂದೊಂದು ದಿನ ದಕ್ಷಿಣ ಕನ್ನಡ ಮೂಡಬಿದರೆಯಲ್ಲಿರುವ ಜೈನರು, ಧರ್ಮಸ್ಥಳದ ಖಾವಂದರು, ಶ್ರವಣ ಬೆಳಗೊಳದ ಮುನಿಗಳು ಕನ್ನಡಿಗರು ಅನ್ನುವುದನ್ನು ಈ ಹೋರಾಟಗಾರರು ಮರೆತು ಬಿಡುತ್ತಾರೆ.
ರಾಜಸ್ಥಾನ ಸೇರಿದಂತೆ ಉತ್ತರ ಭಾರತದಿಂದ ಬಂದು ಇಲ್ಲಿ ಹಿಂದಿ ಹೇರಿಕೆ ಮಾಡುತ್ತಿರುವ ಮಂದಿಗೂ ಕನ್ನಡ ನೆಲದಲ್ಲೇ ಹುಟ್ಟಿ ಬೆಳೆದ ಜೈನರಿಗೆ ಸಾಕಷ್ಟು ವ್ಯತ್ಯಾಸವಿದೆ ಅನ್ನುವುದು ಈ ಹೋರಾಟಗಾರರಿಗೆ ಅದು ಯಾವಾಗ ಅರ್ಥವಾಗುತ್ತದೋ.
ಪರಭಾಷೆಯ ಮಂದಿ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಇದೇ ಹೋರಾಟಗಾರರು ಎಲ್ಲಿ ಅಡಗಿದ್ದರೋ ಗೊತ್ತಿಲ್ಲ. ಬೆಳಗಾವಿಯಲ್ಲಿ ಕರ್ನಾಟಕದ ಶಾಸಕರು ಮರಾಠಿ ಮೇಲೆ ಸಿಕ್ಕಾಪಟ್ಟೆ ಪ್ರೀತಿ ತೋರುತ್ತಿದ್ದಾರೆ. ಮೋರೆಯಂತಹ ವ್ಯಕ್ತಿಗೆ ಪಾಠ ಕಲಿಸದ ನಂತರ ಎಲ್ಲರೂ ಸೈಲೆಂಟ್ ಆಗಿದ್ದಾರೆ.
ಕನ್ನಡ ಓದಲು ಬರೆಯಲು ಬಾರದ ಮಂದಿಯೇ ಶಾಸಕರಾಗಿದ್ದಾರೆ, ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ, ಮಿಂಚಿದ್ದಾರೆ ಹಾಗಾದರೆ ಅವರು ಕನ್ನಡಿಗರಲ್ಲವೇ.
ಹೀಗೆ ಹೋರಾಟ ಹಾದಿ ತಪ್ಪಿದರೆ ನಾಳೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಮಾತೃಭಾಷೆ ಕನ್ನಡ ಆಗಿರಲಿಲ್ಲ, ಬೇಂದ್ರೆ ರವರು ಮಾತೃಭಾಷೆ ಕನ್ನಡವಲ್ಲ. ಕರಾವಳಿ ಮಂದಿ ತುಳು ಮಾತನಾಡುತ್ತಾರೆ ಅವರು ಕನ್ನಡದವರು ಅಲ್ಲ ಎಂದು ಘೋಷಿಸಿದರೂ ಅಚ್ಚರಿ ಇಲ್ಲ ಈ ಹೋರಾಟಗಾರರು.
ಹಾಗಾದರೆ ಕನ್ನಡದ ಹೋರಾಟ ಅಗತ್ಯವಿಲ್ಲವೇ ಖಂಡಿತಾ ಇದೆ. ಕನ್ನಡದ ಎಲ್ಲಾ ಕಡೆ ನಾಮಫಲಕ ಅಭಿಯಾನ ನಡೆಯಲಿ. ಬೆಂಗಳೂರು ಕೆಲ ಏರಿಯಾಗಳಿಗೆ ಸೀಮಿತ ಮಾಡಬೇಡಿ.
ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ ಅನ್ನುವುದು ಸ್ಪಷ್ಟ, ಅದರ ವಿರುದ್ಧ ಹೋರಾಟ ನಡೆಯಲಿ. ಕೇಂದ್ರದ ಇಲಾಖೆಯ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಹೋರಾಟ ನಡೆಯಲಿ. ಬ್ಯಾಂಕುಗಳಲ್ಲಿ ಪರ ರಾಜ್ಯದ ಮಂದಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಅನ್ನುವುದು ಸತ್ಯ, ಅದರ ವಿರುದ್ಧ ಹೋರಾಟ ನಡೆಯಲಿ.
ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡಕ್ಕೆ ಅನ್ಯಾಯವಾಗುತ್ತಿದೆಯೇ ಹೋರಾಟ ನಡೆಯಲಿ. ಪರಭಾಷಿಕರು ನಡೆಸುತ್ತಿರುವ ಉದ್ಯಮಿಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆಯೇ ನಡೆಯಲಿ ಹೋರಾಟ.
ಗಡಿನಾಡು ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ, ನಡೆಯಲಿ ಹೋರಾಟ. ಬೆಂಗಳೂರಿನ SP ರೋಡ್ ಅಂಗಡಿಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುವಂತಾಗಬೇಕು ನಡೆಯಲಿ ಹೋರಾಟ. ಸಂಪಗಿರಾಮನಗರ ಅನ್ನುವ ಪಕ್ಕಾ ಕನ್ನಡದ ಏರಿಯಾದಲ್ಲಿ ಮಗ್ಗದ ಮನೆಗಳು ಸಾಕಷ್ಟಿತ್ತು. ಆದರೆ ಅಲ್ಲಿ ಇದೀಗ ಮಗ್ಗದ ಮಂದಿಗೆ ಸಂಕಷ್ಟ ಬಂದಿದೆ. ನಡೆಯಲಿ ಹೋರಾಟ.
ಕನ್ನಡ ಸಂಘಟನೆಗಳು ಕನ್ನಡದ ಉಳಿವಿಗಾಗಿ ಬೆಳವಣಿಗಾಗಿ ಹೋರಾಟ ನಡೆಸಬೇಕು ಹೊರತು ರಾಜಕೀಯಕ್ಕಾಗಿ ಅಲ್ಲ. ಹೋರಾಟ ಆದಾಯದ ಮೂಲವಾದರೆ ಮುಂದೊಂದು ದಿನ ಕನ್ನಡವನ್ನು ನಾವೇ ಅಪಾಯದಂಚಿಗೆ ತಳ್ಳುತ್ತೇವೆ ನೆನಪಿರಲಿ.
Discussion about this post