ಬೆಂಗಳೂರು : ನಿರೀಕ್ಷೆಯಂತೆ ಯಡಿಯೂರಪ್ಪ ಸೋತು ಗೆದ್ದಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಯಡಿಯೂರಪ್ಪ ತಮ್ಮ ಶಿಷ್ಯನನ್ನೇ ಉತ್ತರಾಧಿಕಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ಪ್ರಸ್ತಾಪಿದ್ದು ಗೋವಿಂದ ಕಾರಜೋಳ ಬೊಮ್ಮಾಯಿ ಹೆಸರನ್ನು ಅನುಮೋದಿಸಿದ್ದಾರೆ.
ರಾಜಕೀಯ ಚಿಂತಕರ ಪ್ರಕಾರ ಇದು ಯಡಿಯೂರಪ್ಪ ಆಯ್ಕೆಯೇ ಹೊರತು ಹೈಕಮಾಂಡ್ ಆಯ್ಕೆಯಲ್ಲ. ಅಸಮಾಧಾನಗೊಂಡಿರುವ ಲಿಂಗಾಯತರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರೇ ಬೊಮ್ಮಾಯಿ ಹೆಸರನ್ನು ಪ್ರಸ್ತಾಪಿಸುವಂತೆ ಹೈಕಮಾಂಡ್ ನೋಡಿಕೊಂಡಿದೆ. ಈ ಮೂಲಕ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಕಡೆಯಿಂದ ಯಾವುದೇ ಅನ್ಯಾಯವಾಗಿಲ್ಲ ಅನ್ನುವುದನ್ನು ಸಾಬೀತು ಮಾಡಲಾಗಿದೆ.
ಯಡಿಯೂರಪ್ಪ ಅವರೇ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು, ಯಡಿಯೂರಪ್ಪ ಅವರೇ ಮುಂದಿನ ಸಿಎಂ ಹೆಸರನ್ನು ಪ್ರಸ್ತಾಪಿಸಿದರು. ಹೀಗಾಗಿ ಮುಂದಿನ ಸಲ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆ ಯಡಿಯೂರಪ್ಪ ಅವರಿಗೆ ಸೇರಿದೆ ಅನ್ನುವುದು ಹೈಕಮಾಂಡ್ ನಿರ್ಧಾರವಾಗಿದೆ. ಈ ಮೂಲಕ ಯಡಿಯೂರಪ್ಪ ಅವರ ಕೈ ಮೇಲಾಗುವಂತೆ ನೋಡಿಕೊಂಡಿರುವ ಹೈಕಮಾಂಡ್ ಮುಂದಿನ ದಿನಗಳಲ್ಲಿ ಹೊಸ ಆಟದ ಪ್ರಯೋಗಕ್ಕೆ ಸಜ್ಜಾಗಿದೆ.
Discussion about this post