ನೆರೆ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡುತ್ತಿರುವ ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ಸಿಕ್ಕಾಪಟ್ಟೆ ವಾಗ್ದಾಳಿ ನಡೆಸುತ್ತಿದೆ.
ಈ ನಡುವೆ ತೇಜಸ್ವಿ ಸೂರ್ಯ ಅವರಂತಹ ಸಂಸದರು ಕೇಂದ್ರದ ನೆರವಿನ ಅಗತ್ಯವಿಲ್ಲ ಎಲ್ಲವನ್ನೂ ರಾಜ್ಯ ಸರ್ಕಾರ ನಿಭಾಯಿಸಲಿದೆ ಅನ್ನುತ್ತಾರೆ. ಆದರೆ ನೆರೆಯಿಂದ ತತ್ತರಿಸಿದ ಜನರ ಪಾಡು ಮಾತ್ರ ಹೇಳತೀರದು.
ವಿದೇಶಗಳಿಗೆ ನೆರವಿನ ಮಹಾಪೂರ ಹರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಾತ್ರ ಕರ್ನಾಟಕಕ್ಕೆ ಬಿಡಿಗಾಸು ಕೊಡುತ್ತಿಲ್ಲ. ಈ ನಡುವೆ ಕರ್ನಾಟಕದ ನೆರೆಯ ಬಗ್ಗೆ ದಿವ್ಯ ಮೌನಕ್ಕೆ ಶರಣಾಗಿದ್ದ ಮೋದಿ, ಉತ್ತರ ಭಾರತದಲ್ಲಿ ಪ್ರವಾಹ ಬಂದ ತಕ್ಷಣ ಟ್ವೀಟರ್ ನಲ್ಲಿ ಸ್ಪಂದಿಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ನಡುವೆ ಕೇಂದ್ರ ನಾಯಕರ ವರ್ತನೆ ಬಗ್ಗೆ ಬಿಜೆಪಿ ಶಾಸಕರೊಬ್ಬರು ದನಿ ಎತ್ತಿದ್ದಾರೆ. ವಿಜಯಪುರ ನಗರ ಕ್ಷೇತ್ರದ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷದ ಕೇಂದ್ರ ನಾಯಕರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಬಿಜೆಪಿ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನೇರ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಯತ್ನಾಳ್, ಉತ್ತರ ಕರ್ನಾಟಕ ಸಹಿತ ಬಹುಪಾಲು ಕರ್ನಾಟಕ ನೆರೆ ಹಾವಳಿಗೆ ತತ್ತರಿಸಿದ್ದರೂ ಕೇಂದ್ರದಿಂದ ಸಮರ್ಪಕ ಅನುದಾನ ಲಭಿಸಿಲ್ಲ. ರಾಜ್ಯದಲ್ಲಿ ಸದ್ಯಕ್ಕೆ ಚುನಾವಣೆ ಇಲ್ಲ ಎಂಬ ಭಾವನೆಯಲ್ಲಿ ಕೇಂದ್ರ ಸರಕಾರ ಇರುವಂತಿದೆ ಆದರೆ ಈ ಭಾವನೆ ಸರಿಯಲ್ಲ ಮತ್ತು ನೆರೆ ಪೀಡಿತರ ವಿಚಾರದಲ್ಲಿ ಈ ರೀತಿಯ ರಾಜಕಾರಣ ಮಾಡುವುದನ್ನು ಜನ ಸಹಿಸಿಕೊಳ್ಳುವುದಿಲ್ಲ ಎಂದು ಯತ್ನಾಳ್ ಅವರು ಕೇಂದ್ರ ನಾಯಕರಿಗೆ ಎಚ್ಚರಿಕೆ ರೂಪದ ಸಂದೇಶ ನೀಡಿದ್ದಾರೆ.
ಕಳೆದ ಬಾರಿಯ ಸಂಸತ್ ಚುನಾವಭೆಯಲ್ಲಿ ರಾಜ್ಯದ ಜನ ಬಿಜೆಪಿಗೆ 25 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಇಷ್ಟು ಸಂಖ್ಯೆಯ ಬಿಜೆಪಿ ಶಾಸಕರು ಆಯ್ಕೆಯಾದ ದಾಖಲೆ ಇಲ್ಲ ಹಾಗಿರುವಾಗ ರಾಜ್ಯದ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಈ ನಿರ್ಲಕ್ಷ್ಯ ಧೋರಣೆ ತಪ್ಪು ಎಂದು ಯತ್ನಾಳ್ ಅವರು ಅಭಿಪ್ರಾಯಪಟ್ಟರು.
ಕೇಂದ್ರ ಸರಕಾರದ ನಿರ್ಲಕ್ಷ್ಯಧೋರಣೆ ಇದೇ ರೀತಿಯಲ್ಲಿ ಮುಂದುವರೆದರೆ ರಾಜ್ಯದ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಯತ್ನಾಳ್ ಅವರು ಎಚ್ಚರಿಕೆ ನೀಡಿದರು. ಎಂತೆಂಥವರನ್ನೋ ಜನ ಮನೆಗೆ ಕಳುಹಿಸಿದ್ದಾರೆ ಹಾಗಿರುವಾಗ ಇವರೆಲ್ಲಾ ಯಾವ ಲೆಕ್ಕ? ನಾವು ಇವರನ್ನು ಕೆಳಗಿಳಿಸೋದಲ್ಲ ಬದಲಾಗಿ ಜನರೇ ಕೆಳಗಿಳಿಸುತ್ತಾರೆ ಎಂದು ಯತ್ನಾಳ್ ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಹಳ್ಳಿ ಹಳ್ಳಿಗಳಿಗೆ ಹೋಗಿ ಪಕ್ಷವನ್ನು ಸಂಘಟನೆ ಮಾಡಿದ್ದು ನಾವು ಹಾಗಾಗಿ ಜನರಿಗೆ ನಾವು ಉತ್ತರ ಕೊಡಬೇಕು. ಇವತ್ತು ಉತ್ತರ ಕರ್ನಾಟಕದ ಜನ ಪರದಾಡ್ತ ಇದ್ದಾರೆ. ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಟ್ವೀಟ್ ಮಾಡ್ತಾರೆ, ಆದ್ರೆ ನಮ್ಮ ಜನ ಇವರಿಗೆ ಏನು ಮಾಡಿದ್ದಾರೆ? ಜನರಿಗೆ ನಾವೇನು ಉತ್ತರ ಕೊಡಬೇಕು? ಸಾಮಾಜಿಕ ಜಾಲತಾಣಗಳಲ್ಲಿ ಜನ ನಮ್ಮ ವಿರುದ್ಧ ಪ್ರಶ್ನೆ ಮಾಡ್ತಿದ್ದಾರೆ? ಎಂದು ಯತ್ನಾಳ್ ಅವರು ಕೇಂದ್ರ ಬಿಜೆಪಿ ನಾಯಕರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದರು.
Discussion about this post