ಬೆಂಗಳೂರು : ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಟ್ರಾಫಿಕ್ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಟ್ರಾಫಿಕ್ ನಿಯಂತ್ರಿಸುವುದಕ್ಕಿಂತಲೂ ದಂಡ ವಸೂಲಿಗೆ ಇವರು ಒತ್ತು ನೀಡುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಿದೆ. ಜೊತೆಗೆ ಇದು ಹೌದು ಅನ್ನಿಸುವ ಅನೇಕ ಘಟನೆಗಳು ನಡೆದಿದೆ. ಅದರಲ್ಲೂ ಬೆಂಗಳೂರಿನಲ್ಲಿ ಟೋಯಿಂಗ್ ವಾಹನಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಿಸುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಾರ್ವಜನಿಕರೊಂದಿಗೆ ಸದಾ ಸಂಘರ್ಷವಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಗೃಹ ಸಚಿವರೇ ಟೋಯಿಂಗ್ ಮಾಡುವಾಗ ನಿಯಮಗಳನ್ನು ಪಾಲಿಸಿ ಎಂದು ಆದೇಶಿಸಿದ್ದರು. ಆದಾದ ಮರು ದಿನವೇ ಟೋಯಿಂಗ್ ಮಾಡೋ ಭರದಲ್ಲಿ ವಾಹನವೊಂದಕ್ಕೆ ಡ್ಯಾಮೇಜ್ ಮಾಡಲಾಗಿತ್ತು. ಇನ್ನು ಟೋಯಿಂಗ್ ಮಾಡುವ ಮುನ್ನ ಅನೌನ್ಸ್ ಮಾಡಬೇಕು ಅನ್ನುವ ನಿಯಮವಿದೆ. ಅದನ್ನು ಪಾಲಿಸುವುದಂದ್ರೆ ಪೊಲೀಸರಿಗೆ ಅಲರ್ಜಿ.
ಈ ನಡುವೆ ಟೋಯಿಂಗ್ ವಾಹನಗಳ ದರ್ಬಾರಿಗೆ ಬ್ರೇಕ್ ಹಾಕುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಸುವರ್ಣ ವಾಹಿನಿಯ ಹಲೋ ಸಿಎಂ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂಥ್ ಜೊತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಗೃಹ ಇಲಾಖೆಯ ವಿಚಾರದಲ್ಲಿ ಮುಖ್ಯಮಂತ್ರಿಗಳೇ ಮಧ್ಯಪ್ರವೇಶಿಸುವ ಅಗತ್ಯ ಬಂದಿದೆ ಅಂದ್ರೆ ಅರಗ ಜ್ಞಾನೇಂದ್ರ ಅವರು ತಮ್ಮ ಕಾರ್ಯವೈಖರಿಯನ್ನು ಅವಲೋಕನ ಮಾಡಿಕೊಳ್ಳುವುದು ಉತ್ತಮ.
Discussion about this post