ಬೆಂಗಳೂರು : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ.ಅದರಲ್ಲೂ ಬಿಜೆಪಿ ಮುಖ್ಯಮಂತ್ರಿಯನ್ನೇ ಬದಲಾಯಿಸುವ ಮೂಲಕ ಆಡಳಿತ ವಿರೋಧಿ ಅಲೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ರಣತಂತ್ರ ಹೂಡಿದೆ. ಈ ನಡೆ ಡಿಕೆಶಿ ಪಾಳಯವನ್ನು ಕಂಗಾಲು ಮಾಡಿದೆ.
ಈ ನಡುವೆ ರಾಜ್ಯ ಬಿಜೆಪಿ ನಾಯಕರು ಸರಳ, ಭ್ರಷ್ಟಚಾರ ರಹಿತ ಆಡಳಿತದ ಮಂತ್ರ ಪಠಿಸಲಾರಂಭಿಸಿದ್ದಾರೆ. ಅದರಲ್ಲೂ ಬೊಮ್ಮಾಯಿವರು, ಗೌರವ ವಂದನೆ ರದ್ದು, ಝೀರೋ ಟ್ರಾಫಿಕ್ ರದ್ದು, ಹಾರ ಶಾಲು ಬದಲು ಪುಸ್ತಕ ಹೀಗೆ ಜನ ಮೆಚ್ಚುಗೆಗೆ ಪಾತ್ರವಾಗುವ ಕಾರ್ಯ ಶುರುವಿಟ್ಟುಕೊಂಡಿದ್ದಾರೆ. ಇನ್ನು ಬೊಮ್ಮಾಯಿ ಸಂಪುಟದ ಅರಗ ಜ್ಞಾನೇಂದ್ರ ಮತ್ತು ಸುನಿಲ್ ಕುಮಾರ್ ಕೂಡಾ ಇದೇ ಹಾದಿಯಲ್ಲಿದ್ದಾರೆ.
ಈ ಬೆಳವಣಿಗೆಯ ನಡುವೆ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿರುವ ಡಿಕೆ ಶಿವಕುಮಾರ್ ಪಕ್ಷ ಸಂಘಟನೆ ಕಾರ್ಯಕ್ಕೆ ವೇಗ ಕೊಟ್ಟಿದ್ದಾರೆ. ಮನೆ ಮನೆಗೂ ಕಾಂಗ್ರೆಸ್ ಅನ್ನು ತಲುಪಿಸುವುದು ಅವರ ಯೋಜನೆ. ಇದೀಗ ಬಿಜೆಪಿ ನಾಯಕರ ಹೇಳಿಕೆಯನ್ನೇ ಫಾಲೋ ಮಾಡಿರುವ ಡಿಕೆಶಿ ಸರಳತೆ ಮಂತ್ರ ಜಪಿಸಲಾರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ ಇನ್ಮುಂದೆ ಶಾಲು ಹಾಕೋದು, ದೊಡ್ಡ ದೊಡ್ಡ ಹೂವಿನ ಹಾರ ಹಾಕೋದು ಬೇಡ ಅಂದಿದ್ದಾರೆ. ಸಾಲು ಗೀಲು ಬೇಡ, ಪುಸ್ತಕವೊಂದನ್ನು ಕೊಡುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಇನ್ಮುಂದೆ ನಾಯಕರು ವೇದಿಕೆಯಲ್ಲಿ ಕೂರುವ ಕ್ರಮ ಇರೋದಿಲ್ಲ, ಕಾರ್ಯಕರ್ತರ ಸಾಲಿನಲ್ಲೇ ನಾಯಕರು ಕುಳಿತುಕೊಳ್ಳಲಿದ್ದಾರೆ. ಮಾತನಾಡುವವರು ಮಾತ್ರ ವೇದಿಕೆ ಹತ್ತಬೇಕು ಎಂದು ಸೂಚಿಸಿದ್ದಾರೆ.
Discussion about this post