ಪುತ್ತೂರು ಮಹಾಲಿಂಗೇಶ್ವರನ ಅನ್ನ ಪ್ರಸಾದದ ಬಗ್ಗೆ ಶಾಸಕರಿಗೆ ದೂರು ಸಲ್ಲಿಕೆ
ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ( puttur mahalingeshwara temple ) ಇತ್ತೀಚೆಗೆ ಮಧ್ಯಾಹ್ನ ಹೊತ್ತು ಊಟಕ್ಕೆಂದು ಬಂದ ಭಕ್ತರನ್ನು ಊಟ ಮುಗಿದಿದೆ ಎಂದು ಹೇಳಿ ವಾಪಾಸು ಕಳುಹಿಸಿದ ಘಟನೆ ನಡೆದಿರುವ ಕುರಿತಂತೆ ದೂರುಗಳು ಬರುತ್ತಿವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ
ಇತ್ತೀಚೆಗೆ ಪುತ್ತೂರು ದೇವಳದ ನವೀಕೃತ ಮಹಾಲಿಂಗೇಶ್ವರ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಸಾರ್ವಜನಿಕರ ದುಡ್ಡಲ್ಲಿ ದೇವಸ್ಥಾನ ನಡೆಯುತ್ತಿದೆ. ದೇವರ ಪ್ರಸಾದ ಪ್ರತಿಯೊಬ್ಬರಿಗೂ ಸಿಗಬೇಕು. ವ್ಯವಸ್ಥಾಪನ ಸಮಿತಿಯವರು ಈ ಸಮಸ್ಯೆ ಕುರಿತಂತೆ ಬಗೆ ಹರಿಸಬೇಕು ಎಂದೂ ಹೇಳಿದ ಶಾಸಕರು ಈ ರೀತಿ ದೂರುಗಳು ಮತ್ತೆ ಬಾರದಂತೆ ಗಮನಹರಿಸಿ ಎಂದು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಶ್ರೀನಿವಾಸ್ ಕೆವಿ ಅವರಿಗೆ ಸೂಚಿಸಿದರು.
ಇದೇ ವೇಳೆ ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯನ್ನು ಕೇಂದ್ರವಾಗಿಟ್ಟುಕೊಂಡು, ಪುತ್ತೂರನ್ನು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿ ಮಾಡುವ ಬಗ್ಗೆ ಯೋಚನೆಗಳಿದೆ. ಈ ಸಲುವಾಗಿ ದೇವಸ್ಥಾನ ಸಮಗ್ರ ಅಭಿವೃದ್ಧಿಗೊಳಿಸಬೇಕಾಗಿದೆ. ದೇವಾಲಯದ ಪಶ್ಚಿಮ ಕೆರೆಯ ಸಮೀಪದಲ್ಲಿರುವ 7 ಮನೆಗಳನ್ನು ತೆರವು ಮಾಡಿ ಆ ಜಾಗವನ್ನು ದೇವಾಲಯಕ್ಕೆ ಬಳಸಿಕೊಳ್ಳಬೇಕಿದೆ.
ಈ ಸಂಬಂಧ ಆ ಕುಟುಂಬಗಳ ಮನವೊಲಿಸಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿ ಶಾಸಕರು, ದೇವಾಲಯದ ಕೆರೆಯಲ್ಲಿ ಕಾರಂಜಿ ಅಳವಡಿಸಿ ಅದರ ಸುತ್ತ ವಿಶಾಲ ಜಾಗ ಮಾಡಿಕೊಟ್ರೆ ಭಕ್ತರು ಸಂಜೆ ಕೆರೆಯ ವಠಾರದಲ್ಲಿ ಸೇರಲು ಸಾಧ್ಯವಾಗುತ್ತದೆ. ಕುದ್ರೋಳಿ ದೇವಾಲಯದ ರೀತಿಯಲ್ಲೇ ಇಲ್ಲೂ ಅಭಿವೃದ್ಧಿಯಾದರೆ ಧಾರ್ಮಿಕ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
Discussion about this post