Arecanut import ಅಡಿಕೆ ವಿಷಯದಲ್ಲಿ ಹೋರಾಟ ನಡೆಸಿ ಮತ ಗಳಿಸಿದ್ದ ಬಿಜೆಪಿ ಈಗ ಅದೇ ಬೆಳೆಗಾರರನ್ನು ಮರೆತಿರುವುದು ವಿಪರ್ಯಾಸ
ಈಗಾಗಲೇ ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಸಿಲುಕಿರುವ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲೋದು ಬಹುತೇಕ ಖಚಿತವಾಗಿದೆ. ಅದರಲ್ಲೂ ಬಿಜೆಪಿಯ ತಳಮಟ್ಟದ ಕಾರ್ಯಕರ್ತರೇ ನಾಯಕರ ಬಗ್ಗೆ ಅಸಮಾಧಾನ ಹೊಂದಿದ್ದಾರೆ.ಹಿಂದುತ್ವ ಮತ್ತು ಇತರ ಹೋರಾಟಗಳಲ್ಲಿ ತೊಡಗಿಸಿಕೊಂಡವರಿಗೆ ಕಾನೂನು ನೆರವು ಸರಿಯಾಗಿ ಸಿಗುತ್ತಿಲ್ಲ ಅನ್ನುವುದು ಕಾರ್ಯಕರ್ತರ ಆಕ್ರೋಶ. ( Arecanut import)
ಈ ನಡುವೆ ಪಿಎಫ್ಐ ನಿಷೇಧದ ಕಾರಣ ತೀರಾ ಕಡಿಮೆ ಅಂತರದಲ್ಲಿ ಸೋಲು ಕಾಣಬಹುದಾದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರುವ ಸಾಧ್ಯತೆಗಳಿದೆ. ಇನ್ನು SDPI ನಿಷೇಧವಾಗದಿರುವ ಕಾರಣ ಕಾಂಗ್ರೆಸ್ ಮತಗಳನ್ನು ಸೆಳೆಯಲು SDPI ಯಶಸ್ವಿಯಾಗಲಿದೆ. ಹೀಗಾಗಿ ಬಿಜೆಪಿ ಕೆಲವು ಕ್ಷೇತ್ರಗಳನ್ನು ಉಳಿಸಿಕೊಳ್ಳಲಿದೆ. ಆದರೆ ಗಳಿಸಿಕೊಳ್ಳುವ ಸಾಧ್ಯತೆಗಳಿದೆ.
ಆದರೆ ಈ ನಡುವೆ ಕೇಂದ್ರ ಸರ್ಕಾರ ಭೂತಾನ್ ನಿಂದ ಹಸಿ ಅಡಿಕೆ ಆಮದಿಗೆ ಅನುಮತಿ ಕೊಟ್ಟಿರುವ ಕಾರಣ ಕರ್ನಾಟಕದಲ್ಲಿ ಬಿಜೆಪಿ ದೊಡ್ಡ ಪೆಟ್ಟು ತಿನ್ನಲಿದೆ. ಕಾಂಗ್ರೆಸ್ ಈ ಆದೇಶವನ್ನು ಸರಿಯಾಗಿ ರಾಜಕೀಯ ಲಾಭಕ್ಕೆ ಬಳಸಿಕೊಂಡರೆ, ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಬಿಜೆಪಿ ವಿಫಲ ಎಂದು ಬಿಂಬಿಸಿದರೆ ಹಲವು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳುವುದು ಖಚಿತ.
ಈಗಾಗಲೇ ಅಡಿಕೆ ಬೆಲೆ ಗಗನಕ್ಕೆ ಏರುತ್ತಿರುವ ಕಾರಣ ಕರಾವಳಿಯಲ್ಲಿ ಅಧಿಕವಾಗಿದ್ದ ಅಡಿಕೆ ಬೆಳೆ ಬಯಲು ಸೀಮೆಗೂ ಕಾಲಿಟ್ಟಿದೆ. ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಅಡಿಕೆ ತೋಟ ತಲೆ ಎತ್ತುತ್ತಿದೆ. ಅಷ್ಟೇ ಯಾಕೆ ಗುಡ್ಡ ಕಡಿದು ಅಡಿಕೆ ಗಿಡ ನೆಡುವ ಕಾರ್ಯ ಜೋರಾಗಿದೆ.
ಕೇಂದ್ರ ಸರ್ಕಾರ ಭೂತಾನ್ನಿಂದ ಪ್ರತಿವರ್ಷ ಕನಿಷ್ಠ ಆಮದು ಬೆಲೆ (ಎಂಐಪಿ)ಯ ಷರತ್ತು ಇಲ್ಲದೆಯೇ 17,000 ಟನ್ ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಬಹುದು ಎಂದು ಬುಧವಾರ ಅನುಮತಿ ನೀಡಿದೆ.
ಕಳ್ಳ ಮಾರ್ಗದಲ್ಲಿ ಅಡಿಕೆ ವಿದೇಶದಿಂದ ಭಾರತಕ್ಕೆ ಕಾಲಿಡುತ್ತಿದೆ. ಇದರಿಂದ ದೇಶಿಯ ಅಡಿಕೆ ಬೆಲೆ ಕುಸಿಯುವ ಭೀತಿಗೆ ಒಳಗಾಗುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಅಡಿಕೆ ಬೆಳೆಗಾರರಿಗೆ ಆಘಾತ ತಂದಿದೆ. ಈ ಹಿಂದೆ ಅಡಿಕೆ ಆಮದಾಗುತ್ತಿದ್ದ ಕಾಲದಲ್ಲಿ ಅಡಿಕೆ ಬೆಳೆಗಾರರ ಪರಿಸ್ಥಿತಿ ಏನಾಗಿತ್ತು. ಅಡಿಕೆ ಬೆಲೆ ಪಾತಾಳಕ್ಕೆ ಬಿದ್ದ ದಿನಗಳನ್ನು ನೋಡಿದ್ದೇವೆ. ಕನಿಷ್ಟ ಉತ್ಪಾದನಾ ವೆಚ್ಚವಿಲ್ಲದೆ ಕೃಷಿಕರು ಕಂಗಾಲಾಗಿದ್ದರು.
ಹೀಗಾಗಿ 2015ರಲ್ಲಿ 52 ರೂಪಾಯಿಗಳಿದ್ದ ಆಮದು ಬೆಲೆಯನ್ನು 162 ರೂಪಾಯಿಗೆ ಏರಿಸಲಾಗಿತ್ತು. 2017ರಲ್ಲಿ ಇದು 251 ರೂಪಾಯಿಗೆ ಏರಿತು. 2018ರ ಜುಲೈನಲ್ಲಿ 251 ರೂಗಳಿಗಿಂತ ಕಡಿಮೆ ಬೆಲೆಯ ಅಡಿಕೆ ಆಮದು ಮಾಡಿಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.
ಆದರೆ ಈಗ ಕನಿಷ್ಟ ಆಮದು ಬೆಲೆ ಇಲ್ಲದೆ ಭೂತಾನ್ ನಿಂದ ಅಡಿಕೆ ಆಮದಿಗೆ ಅವಕಾಶ ನೀಡಲಾಗಿದೆ. 2022 -23ನೇ ಸಾಲಿನಲ್ಲಿ 8,500 ಮೆಟ್ರಿಕ್ ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳಬಹುದಾಗಿದೆ. ಮುಂದಿನ ವರ್ಷದಿಂದ ಅಂದ್ರೆ 2023 – 24 ರಿಂದ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಬಹುದಾಗಿದೆ.
ಪ್ರತೀ ವರ್ಷ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಭಾರತಕ್ಕೆ ಕಾಲಿಟ್ಟರೆ ಕರ್ನಾಟಕ, ಕೇರಳ ಮತ್ತು ಆಸ್ಸಾಂ ಬೆಳೆಗಾರರು ದೊಡ್ಡ ಹೊಡೆತ ತಿನ್ನಲಿದ್ದಾರೆ. ಇದರೊಂದಿಗೆ ಆಂಧ್ರ ಮತ್ತು ತಮಿಳುನಾಡಿಗೂ ಅಡಿಕೆ ತೋಟಗಳು ವಿಸ್ತರಿಸುತ್ತಿದೆ. ಭವಿಷ್ಯದಲ್ಲಿ ಅವರಿಗೂ ಪರಿಣಾಮ ಬೀರುವ ಸಾಧ್ಯತೆಗಳಿದೆ.
ಆಗಸ್ಟ್ 18 ರಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಮಂಜಪ್ಪ ಹೊಸಬಾಳೆ ಮತ್ತು ರಮೇಶ್ ವೈದ್ಯ ಅವರ ನೇತೃತ್ವದ ನಿಯೋಗ, ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಆಮದು ಬೆಲೆಯನ್ನು 360ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿತ್ತು.
ಮತ್ತೊಂದು ಕಡೆ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ಅಡಿಕೆ ಬೆಳೆಗಾರರ ನಿಯೋಗ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪೀಯೂಷ್ ಗೋಯಲ್, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವನ್ನು ಭೇಟಿಯಾಗಿ ಆಮದು ಮೇಲಿನ ಸುಂಕ ಹೆಚ್ಚು ಮಾಡಿ, ಆಡಿಕೆ ಆಮದಿನ ಮೇಲೆ ನಿಯಂತ್ರಣ ಹೇರಿ ಎಂದು ಮನವಿ ಮಾಡಿತ್ತು.
ಆದರೆ ಈ ಮನವಿಗಳಿಗೆ ಕೇಂದ್ರ ಸರ್ಕಾರ ಕ್ಯಾರೆ ಅಂದಿಲ್ಲ. ಜೊತೆಗೆ ಮನವಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ. ಅಲ್ಲಿಗೆ ರೈತರ ಅಂದ್ರೆ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವವರು ಯಾರು ಊಹಿಸಿಕೊಳ್ಳಿ. ಗಮನಾರ್ಹ ಅಂಶ ಆಂದ್ರೆ ಅಡಿಕೆ ಬೆಳೆಗಾರರಲ್ಲಿ ಬಹುತೇಕ ಬಿಜೆಪಿ ಮತ ಹಾಕುವವರೇ ಹೆಚ್ಚು ಜೊತೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡವರೇ ಅಧಿಕ.
ಈ ನಡುವೆ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಅಡಿಕೆ ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಅಡಿಕೆ ಆಮದು ಇಲ್ಲಿನ ಅಡಿಕೆಯ ದರ ಸ್ಥಿರತೆಗೆ ಪರಿಣಾಮ ಬೀರೋದಿಲ್ಲ. ಗುಣಮಟ್ಟದ ದೇಶಿಯ ಚಾಲಿಗೆ ಇದರಿಂದ ಯಾವುದೇ ತೊಂದರೆ ಇಲ್ಲ.. ಆದರೆ ಈ ಆಮದಿನಿಂದ ಪ್ರಧಾನಮಂತ್ರಿಗಳ ಕನಸಿನ ರೈತರ ಆದಾಯ ಡಬಲ್ ಮಾಡುವ ಸಮಗ್ರ ನೀತಿಗೆ ಪೆಟ್ಟು ಬೀಳಲಿದೆ ಎಂದು ಕ್ಯಾಂಪ್ಕೋ ಸಂಸ್ಥೆ ಹೇಳಿದೆ. ಆದರೆ ಅಡಿಕೆ ಕೃಷಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿರುವವರ ಪ್ರಕಾರ, ಈ ತೀರ್ಮಾನದಿಂದ ತಕ್ಷಣಕ್ಕೆ ಪರಿಣಾಮ ಬೀರದಿರಬಹುದು. ಆದರೆ ಒಂದ್ಸಲ ಭೂತಾನ್ ನಿಂದ ಬಂದು ಸಂಸ್ಕರಣೆಗೊಂಡು ಮಾರುಕಟ್ಟೆಗೆ ತಲುಪಿದಾಗ ದರದ ಮೇಲೆ ಪರಿಣಾಮ ಬೀರಲಿದೆ ಅನ್ನುತ್ತಾರೆ. ಆಮದು ಪ್ರಮಾಣ ಏರಿದಂತೆ ಇಲ್ಲಿನ ದರ ಇಳಿಕೆಯಾಗೋದು ಖಚಿತವಂತೆ. ಜೊತೆಗೆ ಮುಂದಿನ ದಿನಗಳಲ್ಲಿ ಶ್ರೀಲಂಕಾ, ಇಂಡೋನೇಷಿಯಾ,ಮಾಯನ್ಮಾರ್, ಮಲೇಷ್ಯಾ, ನೇಪಾಳದಿಂದಲೂ ಅಡಿಕೆ ಆಮದಾಗುವ ಸಾಧ್ಯತೆಗಳು ಹೆಚ್ಚಿದೆ.
ಈಗಾಗಲೇ ಅಡಿಕೆ ಬೆಳೆಗಾರರು ಬಿಜೆಪಿ ಮೇಲೆ ಬೇಸರಗೊಂಡಿದ್ದಾರೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ವ್ಯಾಪ್ತಿಗೆ ಬರುವ Directorate of Arecanut and Spices Development ವಿಭಾಗದಲ್ಲಿ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವ ಯಾವುದೇ ಸಂಶೋಧನೆಗಳು ನಡೆಯುತ್ತಿಲ್ಲ. ಕೃಷಿ ವಿಜ್ಞಾನಿಗಳಿಗೂ ಅಡಿಕೆ ಬೆಳೆ ಬಗ್ಗೆ ಸಂಶೋಧನೆ ನಡೆಸಲು ಸೂಕ್ತ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಕರ್ನಾಟಕದ ಅಡಿಕೆ ಬೆಳೆಗಾರರು ತೋಟಕ್ಕೆ ಕಾಲಿಟ್ಟ ಅನೇಕ ರೋಗಗಳಿಂದ ಕಂಗೆಟ್ಟಿದ್ದಾರೆ, ಆ ಬಗ್ಗೆಯೂ ಕೇಂದ್ರ ಸರ್ಕಾರದ್ದು ದಿವ್ಯ ಮೌನ. ಅಷ್ಟೇ ಯಾಕೆ ಈ ಹಿಂದೆ ಅಡಿಕೆ ದರ ಕುಸಿದ ವೇಳೆ ಸದಾನಂದ ಗೌಡ ಅವರ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಲಾಗಿತ್ತು. ಈ ಹೋರಾಟದ ಫಲವಾಗಿ ಬಿಜೆಪಿ ತನ್ನ ಮತ ಬ್ಯಾಂಕ್ ಅನ್ನು ವಿಸ್ತರಿಸಿಕೊಂಡಿತ್ತು ಕೂಡಾ. ಈಗ ಅದೇ ಮತ ಬ್ಯಾಂಕ್ ಬಿಜೆಪಿಗೆ ಕೈಕೊಡುವ ಎಲ್ಲಾ ಲಕ್ಷಣಗಳಿದೆ. ಕರ್ನಾಟಕ ಬಿಜೆಪಿ ಅಡಿಕೆ ಬೆಳೆಗಾರರ ಹಿತ ಕಾಪಾಡಲು ವಿಫಲವಾದರೆ ಅದರಲ್ಲೂ ಭೂತಾನ್ ಅಡಿಕೆ ಆಮದಿಗೆ ತಡೆ ತಾರದೇ ಹೋದ್ರೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅದರ ಫಲ ಅನುಭವಿಸಲಿದೆ.
Discussion about this post