ಟೊಮೊಟೊ ದರ ಪಾತಾಳಕ್ಕೆ ಕುಸಿದು ರೈತ ಕಂಗಲಾದ ವೇಳೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಟೊಮೊಟೊ ಬೆಳೆದ ರೈತರು ರಾತ್ರೋರಾತ್ರಿ ಸಿರಿವಂತರಾಗುತ್ತಿದ್ದಾರೆ ಅನ್ನುವುದು ಸುದ್ದಿಯಾಗುತ್ತಿದೆ. ಅಂದು ರಸ್ತೆಗೆ ಟೊಮೊಟೊ ಎಸೆದಾಗ ರೈತನ ಕಥೆ ಏನಾಗಿತ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ಈ ನಡುವೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತರೊಬ್ಬರು 4 ಕೋಟಿ ರೂ ಗಳಿಸಿದ್ದು, ಕಳೆದ 45 ದಿನಗಳಲ್ಲಿ ಟೊಮೊಟೋ ಮಾರಾಟ ಮಾಡಿ 3 ಕೋಟಿ ರೂ.ಗಳ ಲಾಭ ಗಳಿಸಿದ್ದಾರೆ. ಅಂದ ಹಾಗೇ ಈ ಲಾಭ ಸಿಕ್ಕಿರೋದು ಕೋಲಾರದ ಮಾರುಕಟ್ಟೆಯಲ್ಲಿ.
ಕೋಲಾರ : ಟೊಮೊಟೋ ದರ ಗಗನ ಮುಖಿಯಾಗಿದೆ. ರಿಲಯನ್ಸ್ ಮಾಲ್ ನಲ್ಲಿ ಕೆಜಿಗೆ 125ರಂತೆ ಮಾರಾಟವಾಗುತ್ತಿದೆ. ಈ ನಡುವೆ ಟೊಮೊಟೋ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಹಿಂದಿನ ನಷ್ಟಗಳನ್ನು ಸರಿತೂಗಿಸೋ ಕಾಲ ಬಂತಲ್ಲ ಅನ್ನೋದು ರೈತನ ಮಾತು. ಈ ನಡುವೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತ ದಂಪತಿ 40,000 ಬಾಕ್ಸ್ ಟೊಮೊಟೋ ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ 3 ಕೋಟಿ ರೂ. ಸಂಪಾದಿಸಿದ್ದಾರೆ.
ಟೊಮೊಟೋ ಕೃಷಿಕ ಚಂದ್ರಮೌಳಿ 22 ಎಕರೆ ಕೃಷಿ ಭೂಮಿ ಹೊಂದಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಟೊಮೆಟೋ ಕೃಷಿ ಕೈಗೆತ್ತಿಕೊಂಡಿದ್ದರು. ಇಳುವರಿ ಬೇಗ ಪಡೆಯೋ ನಿಟ್ಟಿನಲ್ಲಿ ಸಾಕಷ್ಟು ಸರ್ಕಸ್ ಕೂಡಾ ನಡೆಸಿದ್ದರು. ಅದರಂತೆ ಇದೀಗ ಅಂದ್ರೆ ಜುಲೈ ಅಂತ್ಯದ ವೇಳೆಗೆ ಟೊಮೆಟೊ ಫಸಲು ಕೊಯ್ಲಿಗೆ ಬಂದಿದ್ದು, ಬೇಡಿಕೆಯ ನಡುವೆಯೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗಿದೆ.
ಚಂದ್ರಮೌಳಿ ಅವರಿಗೆ ಕರ್ನಾಟಕದ ಕೋಲಾರ ಮಾರುಕಟ್ಟೆ ಹತ್ತಿರವಾಗಿರುವ ಕಾರಣ, ತಮ್ಮ ಉತ್ಪನ್ನಗಳನ್ನು ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ.
ಇನ್ನು ತಮಗೆ ಬಂದಿರೋ ಲಾಭದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಇಲ್ಲಿಯವರೆಗೆ ಪಡೆದ ಇಳುವರಿಯಿಂದ 4 ಕೋಟಿ ರೂ. ಆದಾಯ ಬಂದಿದೆ. 22 ಎಕರೆ ಜಮೀನಿನಲ್ಲಿ ಫಸಲು ಪಡೆಯಲು ಕಮಿಷನ್ ಮತ್ತು ಸಾರಿಗೆ ಶುಲ್ಕ ಸೇರಿ 1 ಕೋಟಿ ರೂ ಖರ್ಚು ಮಾಡಿದ್ದೇನೆ. ಹೀಗಾಗಿ 3 ಕೋಟಿ ರೂ. ಲಾಭ ಬಂದಿದೆ ಅಂದಿದ್ದಾರೆ
Discussion about this post