ಬೆಂಗಳೂರು : ಯಡಿಯೂರಪ್ಪ ಸಿಎಂ ಆದ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಹೇಗೆ ಪರದಾಡಿದರೋ, ಹಾಗೇ ಬಸವರಾಜ್ ಬೊಮ್ಮಾಯಿ ಕೂಡಾ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ನೆರೆ ಹಾವಳಿ ಜೋರಾಗಿದೆ, ಕೊರೋನಾ ಸೋಂಕಿನ ಮೂರನೇ ಅಲೆ ಕಾಡುತ್ತಿದೆ, ಲಸಿಕೆ ಸಿಗದೆ ಜನ ಪರದಾಡುತ್ತಿದ್ದಾರೆ. ಇಷ್ಟೆಲ್ಲಾ ಸಂಕಷ್ಟದ ನಡುವೆ ಮುಖ್ಯಮಂತ್ರಿಗಳು ಸಂಪುಟ ಪಟ್ಟಿ ಹಿಡಿದು ಡೆಲ್ಲಿಯಲ್ಲಿ ಕೂತಿದ್ದಾರೆ. ಕರ್ನಾಟಕದಲ್ಲಿ ಸಮಸ್ಯೆಗಳು ಸರತಿ ಸಾಲಿನಲ್ಲಿ ಕೂತಿದೆ ಎಂದು ಗೊತ್ತಿದ್ರು ಬಿಜೆಪಿ ಹೈಕಮಾಂಡ್ ಸಂಪುಟ ಪಟ್ಟಿಗೆ ಫೈನಲ್ ಟಚ್ ನೀಡಲು ಹಿಂದೆ ಮುಂದೆ ನೋಡುತ್ತಿದೆ.
ಈ ನಡುವೆ ಇಂದು ಸಂಜೆ ಸಂಪುಟಕ್ಕೆ ಯಾರೆಲ್ಲಾ ಸೇರಬೇಕು ಅನ್ನುವುದು ಫೈನಲ್ ಆಗಲಿದ್ದು, ನಾಳೆ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿದೆ ಎನ್ನಲಾಗಿದೆ. ಪ್ರಾದೇಶಿಕವಾರು, ಜಾತಿವಾರು ಲೆಕ್ಕದಲ್ಲಿ ಸಂಪುಟಕ್ಕೆ ಸಚಿವರು ಎಂಟ್ರಿ ಕೊಡಲಿದ್ದು, ಯುವ ಮುಖಗಳು ಖಾತೆ ವಹಿಸಿಕೊಳ್ಳುವ ಸಾಧ್ಯತೆಗಳಿದೆ.
ಮತ್ತೊಂದು ಕಡೆ ವಿಜಯೇಂದ್ರ ಕೂಡಾ ಸಂಪುಟ ಸೇರಿಕೊಳ್ಳುತ್ತಾರೆ ಅನ್ನುವ ಸುದ್ದಿಗಳಿದೆ. ಒಂದು ವೇಳೆ ವಿಜಯೇಂದ್ರ ಸಂಪುಟ ಸೇರಿದರೆ ಪ್ರತಿಪಕ್ಷಗಳಿಗೆ ಬಿಜೆಪಿ ಆಹಾರವಾಗುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ ಅಪ್ಪನ ಆಡಳಿತವನ್ನು ಮಗ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದ ಪ್ರತಿಪಕ್ಷಗಳು ಈ ಬಾರಿ ಬೊಮ್ಮಾಯಿ ಹೆಸರಿಗಷ್ಟೇ ಸಿಎಂ ಎಂದು ಊರು ಕೇರಿ ಪ್ರಚಾರ ಮಾಡುವುದು ಗ್ಯಾರಂಟಿ.
ಇನ್ನು ವಿಜಯೇಂದ್ರ ಸಂಪುಟ ಸೇರುತ್ತಾರೆಯೇ ಎಂದು ಬಸವರಾಜ ಬೊಮ್ಮಾಯಿ ಅವರನ್ನು ಕೇಳಿದರೆ, ಅವೆಲ್ಲಾ ನನಗೆ ಗೊತ್ತಿಲ್ಲ, ಹೈಕಮಾಂಡ್ ತೀರ್ಮಾನ ಮಾಡುತ್ತದೆ ಅಂದಿದ್ದಾರೆ.
Discussion about this post