ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾಗತಿಕ ತುರ್ತು ಸ್ಥಿತಿ ಘೋಷಣೆ – ಮಂಕಿ ಪಾಕ್ಸ್
ಮಂಕಿಪಾಕ್ಸ್ ಸಾಂಕ್ರಾಮಿಕ ಸೋಂಕನ್ನು ಜಾಗತಿಕ ವೈದ್ಯಕೀಯ ತುರ್ತುಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇದರ ಬೆನ್ನಲ್ಲೇ ಈ ಸೋಂಕು ಇದೀಗ ಭಾರತಕ್ಕೂ ತಲೆನೋವು ತಂದಿಟ್ಟಿದೆ. ಭಾರತದ ನೆರೆ ರಾಷ್ಟ್ರ ಪಾಕಿಸ್ತಾನಕ್ಕೂ ಈ ಸೋಂಕು ಕಾಲಿಟ್ಟಿದ್ದು,. ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದಲ್ಲಿ ಸಾಂಕ್ರಾಮಿಕದ ಮೂರು ರೂಪಾಂತರಿ ಪ್ರಕರಣಗಳು ದೃಢಪಟ್ಟಿವೆ ಎಂದು ಪಾಕ್ ಸರ್ಕಾರ ಶುಕ್ರವಾರ ಹೇಳಿದೆ.
ಸೌದಿ ಅರೇಬಿಯಾದಿಂದ ಆಗಮಿಸಿರುವ 34 ವರ್ಷದ ವ್ಯಕ್ತಿಯೊಬ್ಬರು ಸೇರಿದಂತೆ ಈ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಗಾಗಲೇ ಆಫ್ರಿಕಾ ದೇಶದಲ್ಲಿ ಈ ಸೋಂಕಿನ ಅಬ್ಬರ ತೀವ್ರವಾಗಿದ್ದು, ಮಂಕಿಪಾಕ್ಸ್ನ 14000ಕ್ಕೂ ಹೆಚ್ಚು ಪ್ರಕರಣಗಳು ಆಫ್ರಿಕಾ ದೇಶಗಳಲ್ಲಿ ಪತ್ತೆಯಾಗಿದ್ದು, 450ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿವೆ.
ಎರಡು ದಿನಗಳ ಹಿಂದಷ್ಟೇ ಯುರೋಪ್ ನ ಸ್ವೀಡನ್ನಲ್ಲಿ ಈ ಸೋಂಕು ಪತ್ತೆಯಾದ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಸೋಂಕು ಪತ್ತೆಯಾಗಿದೆ. ಇದು ಏಷ್ಯಾ ಖಂಡದಲ್ಲಿ ಈ ವರ್ಷ ಬೆಳಕಿಗೆ ಬಂದ ಮೊದಲ ಪ್ರಕರಣವಾಗಿದೆ
1970ರಲ್ಲಿ ಮೊದಲ ಬಾರಿಗೆ ಕಾಂಗೋದಲ್ಲಿ ಕಾಣಿಸಿಕೊಂಡು 2022ರಲ್ಲಿ ವಿಶ್ವದ 116 ದೇಶಗಳಿಗೆ ವ್ಯಾಪಿಸಿದ್ದ ಮಂಕಿಪಾಕ್ಸ್ ಮಾರಕ ಸಾಂಕ್ರಾಮಿಕ ರೋಗ ಎಂದೇ ಹೇಳಲಾಗಿತ್ತು. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೊಸ ಪ್ರಕರಣಗಳ ಸಂಖ್ಯೆ ಶೇ.160ರಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಮಂಕಿಪಾಕ್ಸ್ ಅನ್ನು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ.
ಆಫ್ರಿಕಾದ ಬುರುಂಡಿ, ಉಗಾಂಡ, ರವಾಂಡ, ಕೆನ್ಯಾ ದೇಶಗಳು ಈ ರೋಗದಿಂದ ಈಗಾಗಲೇ ತತ್ತರಿಸಿ ಹೋಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಈ ರಾಷ್ಟ್ರಗಳಿಗೆ ಪೂರೈಕೆ ಮಾಡಿದೆ.
ಸಿಡುಬು ರೋಗದಂತೆ ಕಂಡು ಬರೋ ಈ ರೋಗವನ್ನು 1970ರಲ್ಲಿ ವಿಜ್ಞಾನಿಗಳು ಮನುಷ್ಯರಲ್ಲಿ ಪತ್ತೆ ಮಾಡಿದ್ದರು. ಈ ಹಿಂದೆ ಈ ಸೋಂಕು ಕೋತಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆಫ್ರಿಕಾದಲ್ಲೇ ಈ ಸೋಂಕು ಮನುಷ್ಯನಿಗೆ ಹರಡಿತ್ತು. ಮತ್ತು ಪಶ್ಚಿಮ ಆಫ್ರಿಕಾದಲ್ಲೇ ಈ ಸೋಂಕಿನ ಹಾವಳಿಯೂ ತೀವ್ರವಾಗಿದೆ. ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬರೋ ಮಾನವಿಗೂ ಮಂಕಿ ಪಾಕ್ಸ್ ಹರಡುತ್ತದೆ.
ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಮಾತ್ರವಲ್ಲದೆ ಲೈಂಗಿಕ ಸಂಪರ್ಕದಿಂದಲೂ ಈ ಸೋಂಕು ಹರಡುತ್ತದೆ. ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆದರೆ ಅಪಾಯದಿಂದ ಪಾರಾಗಬಹುದು. ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯ ಅನ್ನಲಾಗಿದೆ.