ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ರಾಜಕೀಯ ನಾಯಕರ ದಂಡೇ ಬರುತ್ತಿದೆ.
ಅದರಲ್ಲೂ ರಾಜಕೀಯ ಅಖಾಡದಲ್ಲಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅನ್ನುವುದು ವಿಶೇಷ.
ಹಾಗೇ ನೋಡಿದರೆ ದೇವೇಗೌಡ, ಕುಮಾರಸ್ವಾಮಿ, ಡಿಕೆಶಿ, ಪರಮೇಶ್ವರ್ ಅವರು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಭೇಟಿ ನೀಡಿದಂತಿಲ್ಲ. ಬದಲಾಗಿ ಯಡಿಯೂರಪ್ಪ, ಈಶ್ವರಪ್ಪ ಹೀಗೆ ರಾಜಕೀಯ ಕಡು ವಿರೋಧಿಗಳು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿ ಹೋಗಿದ್ದಾರೆ.
ಇನ್ನು ಸಿದ್ದರಾಮಯ್ಯ ಮಾಜಿ ಶಿಷ್ಯರ ದಂಡು ಇಂದು ತಮ್ಮ ಮಾಜಿ ನಾಯಕನ ಆರೋಗ್ಯ ವಿಚಾರಿಸಿದೆ. ನಿನ್ನೆಯಷ್ಟೇ ರಮೇಶ್ ಜಾರಕಿಹೊಳಿ ಆರೋಗ್ಯ ವಿಚಾರಿಸಿ ಹೋಗಿದ್ರೆ ಇಂದು ರಾಜಕೀಯವಾಗಿ ಬದ್ಧ ದ್ವೇಷಿಯಾಗಿದ್ದ ಎಚ್ ವಿಶ್ವನಾಥ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ರುಚಿ ತೋರಿಸಿದ ಜಿಟಿ ದೇವೇಗೌಡ, ತಾತ್ವಿಕ ಸಂಘರ್ಷದಲ್ಲಿ ಮೊನಚು ಮಾತಿನಲ್ಲೇ ಟಾಂಗ್ ನೀಡುವ ಸಿಟಿ ರವಿ ಅವರು ಶನಿವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸಿದರು.
ಸಿದ್ದರಾಮಯ್ಯ ಅವರಿಗೆ ಕೈಕೊಟ್ಟು ಬಿಜೆಪಿ ಸೇರಿದ್ದ ‘ಎಸ್ಬಿಎಂ’ ಖ್ಯಾತಿಯ ಎಸ್ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಸಚಿವ ಬಿ ಶ್ರೀರಾಮುಲು, ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯಿಲಿ, ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾರೆಡ್ಡಿ, ಶಾಸಕ ಕೆ ಗೋಪಾಲಯ್ಯ, ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಸೇರಿ ಹಲವು ರಾಜಕೀಯ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
Discussion about this post