ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದು, ಏತನ್ಮಧ್ಯೆ ಕೇರಳ ಪೊಲೀಸರು ಮಂಗಳವಾರ 12 ವರ್ಷದ ಬಾಲಕಿಗೆ ದೇಗುಲ ಪ್ರವೇಶಿಸದಂತೆ ತಡೆದು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.
ಶನಿವಾರ ಶಬರಿಮಲೆ ದೇಗುಲ ತೆರೆದಿದ್ದು, ಈ ಸಂದರ್ಭದಲ್ಲಿ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ಹತ್ತು ಮಂದಿ ಮಹಿಳೆಯರನ್ನು ತಡೆದು ಪೊಲೀಸರು ವಾಪಸ್ ಕಳುಹಿಸಿದ್ದರು. ಸೋಮವಾರವೂ ಇಬ್ಬರೂ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿ ವಿಫಲರಾಗಿದ್ದರು.
ಮಂಗಳವಾರ ಪುದುಚೇರಿಯಿಂದ ಆಗಮಿಸಿದ್ದ ಕುಟುಂಬದವರ ಜತೆ 12 ವರ್ಷದ ಬಾಲಕಿ ಇರುವುದನ್ನು ಗಮನಿಸಿದ ಪೊಲೀಸರು ಆಕೆಯನ್ನು ತಡೆದಿದ್ದರು. ಅಲ್ಲದೇ ವಯಸ್ಸಿನ ದಾಖಲೆ ನೀಡಲು ಕೇಳಿದ್ದರು. ಅದರಂತೆ ಆಧಾರ್ ಕಾರ್ಡ್ ಪರಿಶೀಲಿಸಿದಾಗ, 12 ವರ್ಷವಾಗಿರುವುದು ತಿಳಿದು ಬಂದಿತ್ತು. ಹೀಗಾಗಿ ಆಕೆಯನ್ನು ಶಬರಿಮಲೆ ಪ್ರವೇಶಿಸಲು ಅನುಮತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.
ಬಾಲಕಿಗೆ ದೇಗುಲ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ಕುಟುಂಬದ ಸದಸ್ಯರು ವಿನಂತಿಸಿಕೊಂಡಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.ಆಕೆಯನ್ನು ಮತ್ತೊಂದು ಕೋಣೆಯಲ್ಲಿ ಕೂರಿಸಿ ಕುಟುಂಬದ ಸದಸ್ಯರು ಬೆಟ್ಟವೇರಿ ಶಬರಿಮಲೆ ದೇಗುಲಕ್ಕೆ ತೆರಳಿ ವಾಪಸ್ ಬರುವವರೆಗೆ ಕಾಯುವಂತೆ ಸೂಚಿಸಿದ್ದಾರೆ.
Discussion about this post