ಕನ್ನಡ ರಾಜ್ಯೋತ್ಸವದ ದಿನ ನಾಡ ಧ್ವಜವನ್ನು ಹಾರಿಸುವುದು ಸಂಪ್ರದಾಯ. ಹಾಗಂತ ಹಾರಿಸಲೇಬೇಕು ಅನ್ನುವ ಕಾನೂನಿಲ್ಲ. ಆದರೆ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ಕನ್ನಡಿಗರ ರಕ್ತದಲ್ಲಿ ಬೆರೆದು ಹೋದ ಕಾರಣದಿಂದ ಭಾವನಾತ್ಮಕವಾಗಿ ಅದರ ಮೇಲೊಂದು ಪ್ರೀತಿ. ಹೀಗಾಗಿ ಕನ್ನಡದ ಯಾವುದೇ ಕಾರ್ಯಕ್ರಮವಿರಲಿ ನಾಡ ಧ್ವಜ ಹಾರಿಸುವುದು ವಾಡಿಕೆ. ಇದಕ್ಕೆ ಕನ್ನಡ ರಾಜ್ಯೋತ್ಸವ ಕೂಡಾ ಹೊರತಲ್ಲ.
ಆದರೆ ಈ ಬಾರಿ ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಕನ್ನಡ ರಾಜ್ಯೋತ್ಸವದಂದು ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಸೂಚಿಸಿದೆ. ಆದೇಶದಲ್ಲಿ “ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ನಾಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ರಾಷ್ಟ್ರಧ್ವಜ ಹಾರಿಸಬೇಕು,” ಎಂದು ಹೇಳಲಾಗಿದೆ. ಆದರೆ, ಸುತ್ತೋಲೆಯಲ್ಲಿ ಎಲ್ಲಿಯೂ ಕನ್ನಡ ಧ್ವಜ ಹಾರಿಸಬೇಕೆಂಬುದರ ಬಗ್ಗೆ ಉಲ್ಲೇಖ ಮಾಡಿಲ್ಲ . ಅಂದರೆ ಕನ್ನಡ ಧ್ವಜ ಹಾರಿಸುವ ಹಾಗಿಲ್ಲ ಅನ್ನುವ ಅರ್ಥದ ಆದೇಶವೊಂದು ಹೊರ ಬಿದ್ದಿದೆ ಅಂದಾಯ್ತು.
ಈ ಕಾರಣದಿಂದ ಜಿಲ್ಲಾ ಮಟ್ಟದ ರಾಜ್ಯೋತ್ಸವದ ಕಾರ್ಯಕ್ರಮ ಆಯೋಜಿಸಿದ್ದ ಅಧಿಕಾರಿಗಳು ರಾಷ್ಟ್ರಧ್ವಜ ಹಾರಿಸಲು ಬೇಕಾದ ವ್ಯವಸ್ಥೆ ಮಾಡಿದರೇ ಹೊರತು ನಾಡ ಧ್ವಜ ಹಾರಿಸಲು ವ್ಯವಸ್ಥೆ ಮಾಡಲಿಲ್ಲ. ಹೀಗಾಗಿ ಅನೇಕ ಕಡೆಗಳಲ್ಲಿ ಕನ್ನಡ ಧ್ವಜ ಹಾರಿಸಲಾಗಲಿಲ್ಲ. ಹೋಗ್ಲಿ ಉಸ್ತುವಾರಿ ಸಚಿವರಾದರೂ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಬೇಕಿತ್ತು ತಾನೇ.
ರಾಷ್ಟ್ರ ಧ್ವಜಾರೋಹಣ ನಂತ್ರ ಕನ್ನಡ ಧ್ವಜ ಹಾರಿಸಿದ್ರೆ ಸಚಿವರಿಗೆ ಅದೇನೂ ನಷ್ಟವಾಗುತ್ತಿತ್ತು ಗೊತ್ತಿಲ್ಲ.
ಈ ನಡುವೆ ಕನ್ನಡ ಧ್ವಜ ಹಾರಿಸದೇ ಇರುವ ಕಾರಣದಿಂದ ಸಂಕಷ್ಟ ಗ್ಯಾರಂಟಿ ಅನ್ನುವುದು ಗೊತ್ತಾಗುತ್ತಿದ್ದಂತೆ ಜಾಣತನ ಮೆರೆದ ಬಿಜೆಪಿ ನಾಯಕರು ಪಕ್ಷದ ಕಚೇರಿಯಲ್ಲಿ ಕನ್ನಡ ಧ್ವಜ ಹಾರಿಸಿದ್ದಾರೆ. ಮಾತ್ರವಲ್ಲದೆ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲೂ ಯಡಿಯೂರಪ್ಪ ಕನ್ನಡ ಧ್ವಜ ಅರಳಿಸಿದ್ದಾರೆ.
Discussion about this post