ಆಸ್ಪತ್ರೆಯ ಶವಾಗಾರದಲ್ಲಿಟ್ಟ ಶವವನ್ನು ಸರಿಯಾಗಿ ನಿರ್ವಹಿಸದ ಹಿನ್ನಲೆಯಲ್ಲಿ ಶವ ಸಂಪೂರ್ಣ ಕೊಳೆತು ಹೋದ ಘಟನೆ ಮಂಗಳೂರಿನ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ನಡೆದಿದೆ.
ಇತ್ತೀಚೆಗೆ ವಿದ್ಯುತ್ ಅಘಾತದಿಂದ ಮೃತಪಟ್ಟಿದ್ದ ತೊಕ್ಕೋಟು ನಿವಾಸಿ ವಿಲ್ಸನ್ ಫರ್ನಾಂಡೀಸ್ ಶವವನ್ನು ಅಂತ್ಯಕ್ರಿಯೆಗಾಗಿ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು.
ಆದರೆ ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ವಿಲ್ಸನ್ ಅವರ ಶವ ಸಂಪೂರ್ಣ ಕೊಳೆತು ಹೋಗಿತ್ತು. ಆಸ್ಪತ್ರೆ ಮಂದಿಯನ್ನು ಕೇಳಿದ್ರೆ ಪ್ರಿಜರ್ ಕೆಟ್ಟು ಹೋಗಿದೆ ಅನ್ನುವ ಉತ್ತರ ಕೊಡುತ್ತಾರೆ.
ಈ ಸಂಬಂಧ ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ. ಆದರೆ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ನೊಂದ ವಿಲ್ಸನ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಬೇಕಾಗಿರುವ ಕರಾವಳಿ ಭಾಗದ ಶಾಸಕರು ಮೌನವಾಗಿರುವುದನ್ನು ನೋಡಿದರೆ ಯೇನಪೋಯ ಆಸ್ಪತ್ರೆ ಮೇಲೆ ಇವರಿಗೆಲ್ಲಾ ವಿಚಿತ್ರ ಪ್ರೀತಿ ಇರುವಂತೆ ಕಾಣುತ್ತಿದೆ.
ಆಸ್ಪತ್ರೆ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಸ್ಥಳೀಯ ಶಾಸಕರು ಮತ್ತು ಯಡಿಯೂರಪ್ಪ ಸರ್ಕಾರಕ್ಕೆ ಇಲ್ಲ ಅನ್ನುವುದಾಗಿದ್ದರೆ ಕನಿಷ್ಟ ಪಕ್ಷ ಭಾವನೆಗಳ ಜೊತೆ ಚೆಲ್ಲಾಟವಾಡಿರುವುದಕ್ಕೆ ಪರಿಹಾರ ಧನವನ್ನಾದರೂ ಕೊಡಿಸಲಿ.
ಇನ್ನು ಶವ ಕೊಳೆತಿದೆ ಎಂದು ಗೊತ್ತಾಗುತ್ತಿದ್ದಂತೆ ಸಾರ್ವಜನಿಕರು ಮತ್ತು ವಿಲ್ಸನ್ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಕೂಡಾ ನಡೆಸಿದರು. ಆದರೆ ಡಿಕೆಶಿ ಮೆರವಣಿಗೆಯನ್ನು ಇಡೀ ದಿನ ತೋರಿಸಿದ್ದ ಮಾಧ್ಯಮಗಳು ಈ ಬಗ್ಗೆ ವರದಿಯನ್ನೇ ಪ್ರಸಾರ ಮಾಡಲಿಲ್ಲ. ಮಧ್ಯಮ ವರ್ಗದ ಕುಟುಂಬದ ಭಾವನೆಗಳ ಜೊತೆ ಶ್ರೀಮಂತ ಆಸ್ಪತ್ರೆಯೊಂದು ಚೆಲ್ಲಾಟವಾಡುತ್ತಿದ್ದರೂ ಕರ್ನಾಟಕದ ನ್ಯೂಸ್ ಚಾನೆಲ್ ಗಳು ಅತ್ತ ಸುಳಿಯಲಿಲ್ಲ.
ಭರವಸೆಯ ಬೆಳಕು ಎಂದು ಅರಚಾಟುವ ಮಂದಿಗೂ ಈ ಕುಟುಂಬದ ನೋವು ಕೇಳಿಸಲಿಲ್ಲ. ಆದರೆ ಕೇರಳ ಮಾಧ್ಯಮಗಳು ಆಸ್ಪತ್ರೆಯ ಕರ್ಮಕಾಂಡದ ಕುರಿತಂತೆ ವರದಿ ಮಾಡಿ ಭೇಷ್ ಅನ್ನಿಸಿಕೊಂಡವು.
Discussion about this post