ಕಳೆದ ಕೆಲ ಸಮಯದಿಂದ ಎಟಿಎಂಗಳಲ್ಲಿ 2 ಸಾವಿರ ನೋಟುಗಳ ವಿತರಣೆ ನಿಂತು ಹೋಗಿದೆ. ಬದಲಾಗಿ ಬೇರೆ ಮುಖ ಬೆಲೆಯ ನೋಟುಗಳು ಹೆಚ್ಚಾಗಿ ವಿತರಣೆಯಾಗುತ್ತಿದೆ. ಹೀಗ್ಯಾಕೆ ಎಂದು ತಲೆ ಕೆಡಿಸಿಕೊಂಡವರಿಗೆ ಇದೀಗ ಉತ್ತರ ಸಿಕ್ಕಿದ್ದು, ದೊಡ್ಡ ಮೊತ್ತದ ಮುಖ ಬೆಲೆಯ ನೋಟುಗಳ ಮುದ್ರಣವನ್ನು ಆರ್.ಬಿ.ಐ ಇದೀಗ ಸ್ಥಗಿತಗೊಳಿಸಿದೆ.
“ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್” ಪತ್ರಿಕೆ ಆರ್.ಟಿ.ಐ. ಮೂಲಕ ಸಲ್ಲಿಸಿದ್ದ ಅರ್ಜಿಗೆ ರಿಸರ್ವ್ ಬ್ಯಾಂಕ್ ಕೊಟ್ಟಿರುವ ಉತ್ತರದಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ಈ ಹಣಕಾಸು ವರ್ಷದಲ್ಲಿ 2,000 ರೂ ಮುಖಬೆಲೆಯ ಒಂದೇ ಒಂದು ನೋಟು ಮುದ್ರಣಗೊಳ್ಳದೇ ಇರುವ ಕಾರಣದಿಂದ ಎಟಿಎಂಗಳಿಗೆ 2 ಸಾವಿರ ಮುಖ ಬೆಲೆಯ ನೋಟಿನ ಹರಿವು ನಿಂತು ಹೋಗಿದೆ.
ಈ ಕ್ರಮ ಹಣದ ಅಕ್ರಮ ಸಂಗ್ರಹ ತಡೆಯಲು ಸಹಕಾರಿಯಾಗಲಿದೆ ಜೊತೆಗೆ ಕಪ್ಪು ಹಣದ ಹರಿವನ್ನು ತಡೆಯುವ ಸರ್ಕಾರದ ಪ್ರಯತ್ನಕ್ಕೂ ಸಾಥ್ ನೀಡಲಿದೆಯಂತೆ.
ಹಾಗಾದರೆ ಎರಡು ಸಾವಿರ ರೂಪಾಯಿ ನೋಟು ನಿಧಾನವಾಗಿ ಮಾರುಕಟ್ಟೆಯಿಂದ ಮಾಯವಾಗಲಿದೆಯೇ, ಪರಿಸ್ಥಿತಿ ನೋಡಿದರೆ ಹಾಗೇ ಅನ್ನಿಸುತ್ತಿದೆ.
ನವೆಂಬರ್ 2016ರಲ್ಲಿ ಹಳೆಯ `500 ಮತ್ತು` 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸುವುದಾಗಿ ಸರ್ಕಾರದ ದಿಢೀರ್ ಎಂದು ಘೋಷಿಸಿತ್ತು. ಬಳಿಕ ಆರ್ಬಿಐ 2,000 ರೂ ನೋಟುಗಳನ್ನು ಪರಿಚಯಿಸಿತ್ತು.
ರಿಸರ್ವ್ ಬ್ಯಾಂಕ್ ಕೊಟ್ಟಿರುವ ಆರ್ಟಿಐ ಉತ್ತರದ ಪ್ರಕಾರ, 2016-17ರ ಆರ್ಥಿಕ ವರ್ಷದಲ್ಲಿ 2,000 ರೂಗಳ 3,542.991 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ.ಆದಾಗ್ಯೂ, 2017-18ನೇ ಸಾಲಿನಲ್ಲಿ ಮುದ್ರಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಮತ್ತು ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಿಸಲಾಗಿದೆ.ಇನ್ನು 2018-19ನೇ ಸಾಲಿನಲ್ಲಿ 46.690 ಮಿಲಿಯನ್ ನೋಟುಗಳು ಮುದ್ರಣವಾಗಿದೆ.
ಈ ವರ್ಷದ ಆರಂಭದಲ್ಲಿ 2,000 ರೂ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆಯೆಂದು ವರದಿಗಳು ಬಂದಿದ್ದವು, ಆದರೆ ಸರ್ಕಾರ ಅದನ್ನು ನಿರಾಕರಿಸಿತ್ತು.
ಮಾರ್ಚ್ 2018ರಲ್ಲಿ ಚಲಾವಣೆಯಲ್ಲಿರುವ ಒಟ್ಟೂ ನೋಟುಗಳ ಪ್ರಮಾಣದಲ್ಲಿ ಕೇವಲ ಶೇ.3.3ರಷ್ಟು 2,000 ಮುಖಬೆಲೆ ನೋಟುಗಳಿದ್ದವು. ಇದು 2019 ಹಣಕಾಸು ವರ್ಷದಲ್ಲಿ ಶೇ.3ಕ್ಕೆ ಇಳಿಕೆಯಾಗಿದೆ.
ಕಳ್ಳಸಾಗಣೆಯಂತಹ ಅಕ್ರಮ ಉದ್ದೇಶಗಳಿಗಾಗಿ ಬಳಸಲು ಈ ನೋಟುಗಳು ಸುಲಭವಾದ ಕಾರಣ 2,000 ರೂ ನೋಟುಗಳ ಹೆಚ್ಚಿನ ಚಲಾವಣೆಗೆ ಕಡಿವಾಣ ಹಾಕುವುದರಿಂದ ಅಕ್ರಮ ಸಾಗಾಟಕ್ಕೆ ಬ್ರೇಕ್ ಬೀಳುವ ನಿರೀಕ್ಷೆ ಇದೆ.
Discussion about this post