ಕೇಳಿದ್ದು ಪರಿಹಾರ….ಕೊಟ್ಟಿದ್ದು ನೋಟಿಸ್
ಅದ್ಯಾಕೋ ರಾಜ್ಯದಲ್ಲಿ ಬಿಜೆಪಿ ಗ್ರಹಚಾರ ಕೆಟ್ಟಿರುವಂತೆ ಕಾಣುತ್ತಿದೆ. ಬಲಿಷ್ಟ ಭಾರತಕ್ಕಾಗಿ ಎಂದು ಬಿಜೆಪಿ ಮತ ಕೊಟ್ಟವರೇ ಇದೀಗ ಪಕ್ಷ ವಿರುದ್ಧ ತಿರುಗಿ ಬೀಳುವ ದಿನ ದೂರವಿಲ್ಲ.
ಕೇಂದ್ರ ಸರ್ಕಾರ ಕರ್ನಾಟಕದ ಪಕ್ಕ ತೋರುತ್ತಿರುವ ಅಸಡ್ಡೆ ಕಾರಣದಿಂದ ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ನಾಯಕರು ಮೋದಿ ಮತ್ತು ಅಮಿತ್ ಶಾ ವಿರುದ್ಧ ಮಾತನಾಡಿದರೆ ಎಲ್ಲಿ ನಾಳೆ ತೊಂದರೆಯಾಗುತ್ತದೆಯೋ ಎಂದು ಒಳಗೊಳಗೆ ಕುದಿಯುತ್ತಿದ್ದಾರೆ.
ಆದರೂ ಧೈರ್ಯ ಮಾಡಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಇದೀಗ ರಾಜ್ಯ ಬಿಜೆಪಿ ಶೋಕಾಸ್ ನೋಟಿಸ್ ರವಾನಿಸಿದೆ.
ಬಿಜೆಪಿ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದೀರಿ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದೀರಿ, ಹೀಗಾಗಿ 10 ದಿನದಲ್ಲಿ ಉತ್ತರಿಸುವಂತೆ ಶೋಕಾಸ್ ನೋಟಿಸ್ ನಲ್ಲಿ ತಾಕೀತು ಮಾಡಲಾಗಿದೆ. ಒಂದು ವೇಳೆ ಉತ್ತರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇನ್ನು ಶೋಕಾಸ್ ನೋಟಿಸ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಕೇಂದ್ರದ ಬಳಿ ನೆರವು ಕೇಳುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಜನರ ಪರ ಮಾತನಾಡಿದ್ದೇನೆ ಹೊರತು ಸ್ವಾರ್ಥಕ್ಕಾಗಿ ಮಾತನಾಡಿಲ್ಲ. ನಾನು ಪಕ್ಷ ವಿರೋಧಿ ಚಟುವಟಿಯಕೆನ್ನೂ ಮಾಡಿಲ್ಲ. ಜನರ ಸಲುವಾಗಿ ನಾನು ದನಿ ಎತ್ತಿದ್ದೇನೆ. ರಾಷ್ಟ್ರೀಯ ನಾಯಕರ ಗಮನ ಸೆಳೆಯುವುದು ನನ್ನ ಉದ್ದೇಶವಾಗಿತ್ತು ಅಂದಿದ್ದಾರೆ.
ಬಂದಿರುವ ನೋಟಿಸ್ ಗೆ ತಕ್ಕ ಉತ್ತರ ಕೊಡುವುದಾಗಿ ಹೇಳಿರುವ ಯತ್ನಾಳ್. ಹಿಂದೆ ನಾನು ವಾಜಪೇಯಿ ಸರ್ಕಾರದ ಅವಧಿಯಲ್ಲೂ ಜನರಿಗೆ ಅನ್ಯಾಯವಾದ ವೇಳೆ ದನಿ ಎತ್ತಿದ್ದೇನೆ. ಆಗ್ಲೂ ವಾಜಪೇಯಿ ಮುಂದೆ ನನ್ನ ನಿಲ್ಲಿಸಲಾಗಿತ್ತು. ಆಗ ಅವರಿಗೆ ನನ್ನ ಕಾಳಜಿ ಅರ್ಥವಾಗಿತ್ತು. ಇದೀಗ ನಾನು ಜನರ ಪರವಾಗಿ ಮಾತನಾಡಿದ್ದೇನೆ. ಇದಕ್ಕೂ ಪ್ರಧಾನಿ ಮೋದಿಯವರು ಭೇಷ್ ಅನ್ನುತ್ತಾರೆ ಎಂದು ಬಾವುಕರಾಗಿಯೇ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಯತ್ನಾಳ್ ಹೇಳಿದ್ದೇನು…?
ಒಬ್ಬರು ಹುಬ್ಬಳ್ಳಿಯಲ್ಲಿ ಮತ್ತೊಬ್ಬರು ಬೆಂಗಳೂರಿನಲ್ಲಿ ಕುಳಿತಿದ್ದೀರಿ? ದೆಹಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ.ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ.ಕೇಂದ್ರದಿಂದ 10,000 ಕೋಟಿ ಪರಿಹಾರ ತರಲಿ.
ನೆರೆ ಸಂತ್ರಸ್ಥರ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಸಹ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಚಕ್ರವರ್ತಿ ಸೂಲಿಬೆಲೆ ಹೇಳಿರುವುದಲ್ಲಿ ತಪ್ಪೇನಿಲ್ಲ? ನಮ್ಮ 25 ಜನ ಸಂಸದರು ಮೊದಲು ಮತದಾರರಿಗೆ ನಿಷ್ಠರಾಗಿರಲಿ. ಇದು ಪ್ರಜಾತಂತ್ರ ದೇಶ. ಕೇಂದ್ರ ಸಚಿವರು ಕೇವಲ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗದೇ ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲಿ ಎಂದು ಅವರು ಸಂಸದರಿಗೆ ಮನವಿ ಮಾಡಿದ್ದರು.
ಸಚಿವರಾದ ಪ್ರಹ್ಲಾದ ಜೋಶಿ,ಸದಾನಂದಗೌಡ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಪ್ರಧಾನಿ ಅವರ ಭೇಟಿಗೆ ಸಮಯಾವಕಾ ಶ ಕೊಡಿಸಿ ಪರಿಹಾರ ಒದಗಿಸಲು ಸಹಾಯ ಮಾಡಬೇಕೆಂದು ಅವರು ಕೇಂದ್ರ ಸಚಿವರನ್ನು ಆಗ್ರಹಿಸಿದರು.
Discussion about this post