ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂತಿದ್ದ ಯಡಿಯೂರಪ್ಪ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ನಿಮ್ಮನ್ನು ಅಪ್ಪ ಮಕ್ಕಳು ಮುಳುಗಿಸುತ್ತಾರೆ ಅಂದಿದ್ದರು.
ಇದೀಗ ಅದೇ ಪರಿಸ್ಥಿತಿ ಉದ್ಭವಿಸಿದೆ. ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಸೈಲೆಂಟ್ ಆಗಿದ್ದ ಕಾಂಗ್ರೆಸ್ ನಾಯಕರು ರಾಜಕೀಯ ಬೆಳವಣಿಗೆ ಕುರಿತಂತೆ ಉಸಿರೆರಲಿಲ್ಲ. ಆದರೆ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಪ್ರಾರಂಭಿಸಿರುವ ಕುಮಾರಸ್ವಾಮಿ ಮತ್ತು ದೇವೇಗೌಡರು ಅಂದು ಯಡಿಯೂರಪ್ಪ ಹೇಳಿದ ಮಾತನ್ನು ನಿಜ ಮಾಡಲು ಹೊರಟಿದ್ದಾರೆ.
ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಅನ್ನುವ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಅಂತ್ಯಗೊಳಿಸುವ ಹೊಸ ಆಟ ಶುರುವಿಟ್ಟುಕೊಂಡಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಮೋದಿ ವರ್ಸಸ್ ಜಾತ್ಯಾತೀತ ಶಕ್ತಿಗಳು ಎಂದೇ ರಾಜಕೀಯ ಹೋರಾಟವನ್ನು ಬಿಂಬಿಸಲಾಗುತ್ತಿದೆ.ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರ ಸಿಗಲು ಸಿದ್ದರಾಮಯ್ಯ ಅವರೇ ಕಾರಣ ಅನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಗೆ ತಲುಪಿಸುವುದು ಇದರ ಹಿಂದಿನ ಉದ್ದೇಶ.
ಈ ಕಾರಣಕ್ಕಾಗಿಯೇ ದೇವೇಗೌಡರು ಹಿಂದು ಪತ್ರಿಕೆಗೆ ಸಂದರ್ಶನ ಕೊಟ್ಟಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮನೆಗಳಿಗೆ ಯಾವ ಪತ್ರಿಕೆ ಹೋಗುತ್ತದೆ, ಅವರು ಯಾವ ಪತ್ರಿಕೆ ಓದುತ್ತಾರೆ ಅನ್ನುವುದನ್ನು ಗಮನದಲ್ಲಿಟ್ಟುಕೊಂಡೇ ಅವರು ಆಂಗ್ಲ ಪತ್ರಿಕೆಗೆ ಸಂದರ್ಶನ ಕೊಟ್ಟಿರುವುದು.
ಒಂದು ವೇಳೆ ಅವರಿಗೆ ನಿಜವಾಗಿಯೂ ರಾಜ್ಯದ ಜನತೆ ಮುಂದೆ ಸಿದ್ದರಾಮಯ್ಯ ಅವರ ಅಸಲಿ ಮುಖವನ್ನು ಬಯಲು ಮಾಡಬೇಕು, ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅನ್ನುವುದನ್ನು ತಿಳಿಸಬೇಕಾಗಿದ್ದರೆ ಕನ್ನಡ ಪತ್ರಿಕೆ ಮತ್ತು ಕನ್ನಡ ಸುದ್ದಿವಾಹಿನಿಗಳನ್ನು ಕರೆದು ಪ್ರೆಸ್ ಮೀಟ್ ಮಾಡಿದ್ದರೆ ಸಾಕಿತ್ತು. ಆದರೆ ಅವರು ಹಾಗೇ ಮಾಡಿಲ್ಲ ಅನ್ನುವುದನ್ನು ಗಮನಿಸಬೇಕು.
ದೆಹಲಿಯಲ್ಲಿ ಸುದ್ದಿ ಪ್ರಕಟವಾಗುವಂತೆ ನೋಡಿಕೊಂಡರೆ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಮೂಲೆ ಗುಂಪಾಗ್ತಾರೆ. ಅವರಿಗೆ ಅವಕಾಶಗಳನ್ನು ಕಾಂಗ್ರೆಸ್ ಹೈಕಮಾಂಡ್ ನಿರಾಕರಿಸುತ್ತದೆ. ಅಲ್ಲಿಗೆ ಮತ್ತೊಬ್ಬ ಸಾಧಕನನ್ನು ಸೈಲೆಂಟ್ ಮಾಡಿದ ಹಿರಿಮೆ ದಳಪತಿಗಳಿಗೆ ಸಲ್ಲುತ್ತದೆ.
ಹಾಗೇ ನೋಡಿದರೆ ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ ಅನ್ನುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಶಾಸಕರನ್ನು ಕುಮಾರಸ್ವಾಮಿ ನಿರ್ಲಕ್ಷ್ಯ ಮಾಡಿದ್ದು ಮೊದಲ ತಪ್ಪು. ಸಿದ್ದರಾಮಯ್ಯ ಬಾದಾಮಿ ಅಭಿವೃದ್ಧಿ ಕುರಿತಂತೆ ಬರೆದ ಪತ್ರಗಳಿಗೆ ಸ್ಪಂದಿಸದೇ ಇದದ್ದು ಕುಮಾರಸ್ವಾಮಿ ತಪ್ಪು, ಕಾಂಗ್ರೆಸ್ ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಲು ಕುಮಾರಸ್ವಾಮಿ ವಿಳಂಭ ಮಾಡಿದ್ದು ತಪ್ಪು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದು ಕುಮಾರಸ್ವಾಮಿ ತಪ್ಪು.
ಸಾರಾ ಮಹೇಶ್ ಮತ್ತು ಬೋಜೇಗೌಡರನ್ನು ಹೊರತುಪಡಿಸಿದರೆ ಕುಮಾರಸ್ವಾಮಿ ಸುತ್ತ 24 ಗಂಟೆಯೂ ಯಾರಿದ್ದರು. ಒಬ್ಬ ಕಾಂಗ್ರೆಸ್ ಸಚಿವ ಕಾಣಿಸಿಕೊಂಡಿದ್ದರೆ ಹೇಳಿ. ಸಾಲ ಮನ್ನಾ ಸೇರಿದಂತೆ ಮೈತ್ರಿ ಸರ್ಕಾರದ ಪ್ರಮುಖ ಯೋಜನೆಗಳನ್ನು ಘೋಷಿಸುವಾಗ ಅದ್ಯಾವ ಕಾಂಗ್ರೆಸ್ ನಾಯಕರು ಜೊತೆಗಿದ್ದರು. ಆದರೂ ಎಲ್ಲವನ್ನೂ ಸಹಿಸಿಕೊಂಡಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಯೋಜನೆಗಳ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿರಲಿಲ್ಲ.
ತಮ್ಮ ಬೆಂಬಲದಿಂದ ನಡೆಯುತ್ತಿರುವ ಸರ್ಕಾರದಲ್ಲಿ ತಮಗೆ ಮೈಲೇಜ್ ಸಿಗುತ್ತಿಲ್ಲ ಎಂದು ಗೊತ್ತಿದ್ದರೂ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಸಹಿಸಿಕೊಂಡು ಕೂತಿದ್ದರು. ತಮ್ಮ ಪಕ್ಷದ ಬಲ ಕುಗ್ಗುತ್ತಿದೆ ಎಂದು ಗೊತ್ತಿದ್ದರೂ ನೋವು ನುಂಗಿ ನಗು ಚೆಲ್ಲಿದ್ದರು.
ಆದರೆ ಯಾವಾಗ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕರ ಬಂಡಾಯವೆದ್ದರೋ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗಲಿಲ್ಲ. ಎಲ್ಲವೂ ಕೈ ಮೀರಿ ಹೋಗಿತ್ತು.
ಆದರೆ ಇದೀಗ ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಮುಂದಾಗಿರುವ ದಳಪತಿಗಳು ಸಿದ್ದರಾಮಯ್ಯ ಅವರನ್ನು ಹೊಣೆ ಮಾಡಲು ಹೊರಟಿದ್ದಾರೆ. ಆದರೆ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ ಅಂದರೆ ಅದಕ್ಕೆ ಕುಮಾರಸ್ವಾಮಿಯವರ ನಡೆಯೇ ಕಾರಣ ಅನ್ನುವುದರಲ್ಲಿ ಅನುಮಾನವಿಲ್ಲ.
ಹಿಂದೆ 20 20 ಆಟದಲ್ಲೂ ದಳಪತಿಗಳ ಎಡವಟ್ಟೇ ಬಿಜೆಪಿಯನ್ನು ಅಧಿಕಾರಕ್ಕೆ ತಂದಿತ್ತು. ವಚನ ಭ್ರಷ್ಟ ಅನ್ನುವ ಘೋಷಣೆಯೊಂದಿಗೆ ಹೊರಟ್ಟಿದ್ದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಅವತ್ತೂ ಕೂಡಾ ಯಡಿಯೂರಪ್ಪ ಅವರನ್ನು ವಿಲನ್ ಮಾಡುವ ಪ್ರಯತ್ನಗಳು ನಡೆದಿತ್ತು, ಈಗ ಪರಿಸ್ಥಿತಿ ಬದಲಾಗಿಲ್ಲ ಯಡಿಯೂರಪ್ಪ ಜಾಗದಲ್ಲಿ ಸಿದ್ದರಾಮಯ್ಯ.
Discussion about this post