ಸಚಿವ ಸಂಪುಟ ವಿಸ್ತರಣೆಯಾಗದಿರುವ ಕರ್ಮದಿಂದ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಏಕಾಂಗಿಯಾಗಿ ಹೊಡೆದಾಡುತ್ತಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಆಯಾ ಶಾಸಕರು ಎಚ್ಚೆತ್ತುಕೊಂಡು ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ.
ಇನ್ನು ಸಮಸ್ಯೆಯೇ ಇರದ ಜಿಲ್ಲೆಯ ಶಾಸಕರು ತಾವಾಯ್ತು ಎಂದು ಸುಮ್ಮನಿದ್ದಾರೆ. ಹೋಗ್ಲಿ ಕಾಂಗ್ರೆಸ್ ಜೆಡಿಎಸ್ ಶಾಸಕರು ಉತ್ತರ ಕರ್ನಾಟಕ ಕಡೆಗೆ ಹೋಗುವುದು ಬೇಡ ಬಿಜೆಪಿ ಶಾಸಕರು ಹೋಗಬೇಕು ತಾನೇ. ಹೋಗಲು ಟೈಮ್ ಎಲ್ಲಿದೆ. ಕಬ್ಬಡಿಯಾಟ ಮುಖ್ಯವಲ್ಲವೇ.
ಹೌದು ಉತ್ತರ ಕರ್ನಾಟಕದ ನಾಯಕ ಎಂದೇ ಬಿಂಬಿತರಾಗಿರುವ ಶಾಸಕ ಶ್ರೀರಾಮುಲು ಇಂದು ಬಳ್ಳಾರಿಯಲ್ಲಿ ಕಬ್ಬಡಿ ಆಡಿದ್ದೇ ಆಡಿದ್ದು. ಅದ್ಯಾವುದು ಟೂರ್ನಮೆಂಟ್ ಉದ್ಘಾಟಿಸಿದ ಶಾಸಕರು ಉತ್ತರ ಕರ್ನಾಟಕದ ಜನರ ಸಮಸ್ಯೆಯನ್ನು ಮರೆತು ಕಾಲು ಕೆರೆದು, ತೊಡೆ ತಟ್ಟಿ ಕಬ್ಬಡಿ ಉದ್ಘಾಟಿಸಿದ್ದಾರೆ.
ಹಾಗೇ ನೋಡಿದರೆ ಶ್ರೀರಾಮುಲು ಅವರ ಬಳ್ಳಾರಿ ಮತ್ತು ಅವರ ಸ್ವ ಕ್ಷೇತ್ರ ಮೊಳಕಾಲ್ಮುರಿನಲ್ಲಿ ಸಮಸ್ಯೆಯಾಗಿಲ್ಲ. ಹೀಗಾಗಿ ಸಚಿವನಾಗದ ನಾನು ಸಂಬಂಧವಿಲ್ಲದ ಕ್ಷೇತ್ರಕ್ಕೆ ನಾನ್ಯಾಕೆ ಹೋಗಲಿ ಅನ್ನುವ ನಿರ್ಧಾರ ಕೈಗೊಂಡ ಹಾಗಿತ್ತು.
18 ಜಿಲ್ಲೆಗಳು ಪ್ರವಾಹ ಪೀಡಿತಗೊಂಡಿದೆ. ಶ್ರೀರಾಮುಲು ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಹಾಗಿದ್ದ ಮೇಲೆ ಉತ್ತರ ಕರ್ನಾಟಕದ ಜನತೆಯ ಸಮಸ್ಯೆಗಿಂತಲೂ ಬಳ್ಳಾರಿಯ ಕಬ್ಬಡಿ ಮುಖ್ಯವಾಗಿದ್ದು ದುರಂತವೇ ಸರಿ.
ನಿಜಕ್ಕೂ ನಮ್ಮ ಜನಪ್ರತಿನಿಧಿಗಳಿಗೆ ಏನಾಗಿದೆ ಅನ್ನುವುದೇ ಅರ್ಥವಾಗುತ್ತಿಲ್ಲ. ರೇಣುಕಾಚಾರ್ಯ ಮೊಣ ಕಾಲು ನೀರಿನಲ್ಲಿ ತೆಪ್ಪ ಓಡಿಸುತ್ತಾರೆ. ಶ್ರೀರಾಮುಲು ಕಬ್ಬಡಿಯಾಡುತ್ತಾರೆ. ಕಣ್ಣು ನೋವಿನ ನೆಪ ಹೇಳಿ ಸಿದ್ದರಾಮಯ್ಯ ದೆಹಲಿಗೆ ಹಾರುತ್ತಾರೆ. ಸಿದ್ದರಾಮಯ್ಯ ಅವರಿಗಂತು ಬಾದಾಮಿ ಕ್ಷೇತ್ರದ ಜನತೆ ಗೆಲ್ಲಿಸಿದ್ದಾರೆ ಅನ್ನುವುದೇ ಮರೆತು ಹೋಗಿದೆ. ಬಾದಾಮಿಯಲ್ಲಿ ಜನ ಸಂಕಷ್ಟದಲ್ಲಿದ್ದರೂ ಮತದಾರನಿಗೆ ನಿಷ್ಠೆ ತೋರಬೇಕಾದವರು ಪಕ್ಷ ನಿಷ್ಠೆ ತೋರಿಸಲು ಹೋಗಿದ್ದಾರೆ.
Discussion about this post