ಮೋಕೆದ ಸಿಂಗಾರಿ….ಪಕ್ಕಿಲು ಮೂಜಿ.. ಹೀಗೆ ತುಳು ಭಾಷೆಯ ಎವರ್ ಗ್ರೀನ್ ಹಾಡುಗಳ ರಚನೆಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಸೀತಾರಾಮ್ ಕುಲಾಲ್ (78) ರವಿವಾರ ನಿಧನ ಹೊಂದಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸೀತಾರಾಮ್ ಕುಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕುಲಾಲ್ ಅವರು ರಚಿಸಿರುವ ಮೋಕೆದ ಸಿಂಗಾರಿ, ಪಕ್ಕಿಲು ಮೂಜಿ ಒಂಜೇ ಗೂಡ್ ಡ್, ಬ್ರಹ್ಮನ ಬರವು ಮಾಜಂದೆ ಪೋಂಡಾ, ಡಿಂಗಿರಿ ಮಾಮ ಡಿಂಗಿರಿ ಮಾಮ, ಪರಶುರಾಮನ ಕುಡರಿಗ್ ಪುಟಿನ ತುಳುನಾಡ್, ಅಪ್ಪೆ ಮನಸ್ ಬಂಗಾರ ಮುಂತಾದ ಹಾಡುಗಳು ತುಳು ಚಿತ್ರರಂಗದ ಎವರ್ ಗ್ರೀನ್ ಹಾಡುಗಳು ಎಂದೆನಿಸಿಕೊಂಡಿವೆ.
ʼಪಗೆತ ಪುಗೆʼ, ʼಉಡಲ್ದ ತುಡರ್ʼ, ʼಕಾಸ್ ದಾಲ್ ಕಂಡನಿʼ ಮುಂತಾದ ಚಿತ್ರಗಳಿಗೆ ಸಾಹಿತ್ಯ ಬರೆದಿದ್ದ ಸೀತಾರಾಮ ಕುಲಾಲರು ʼಮಣ್ಣ್ ದ ಮಗಲ್ ಅಬ್ಬಕ್ಕʼ ಮತ್ತು ʼ ಧರ್ಮೊಗು ಧರ್ಮದ ಸವಾಲ್ʼ ಕೃತಿಗಳನ್ನು ರಚಿಸಿದ್ದರು.
ಮಂಗಳೂರಿನ ಬಿಜೈಯಲ್ಲಿ ನೆಲೆಯೂರಿದ್ದ ಸೀತಾರಾಮ್ ಕುಲಾಲ್ ರವರು ಮೊದಲು “ದಾಸಿ ಪುತ್ರ ” ಎನ್ನುವ ಕನ್ನಡ ನಾಟಕದ ಮೂಲಕ ರಂಗ ಭೂಮಿ ಪ್ರವೇಶಿಸಿದ್ದರು.
11 ತುಳು ಚಿತ್ರಗಳಿಗೆ 25 ಕ್ಕೂ ಹೆಚ್ಚು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಹಿರಿಯ ತುಳು ಸಾಹಿತಿ ಎಂ.ಕೆ.ಸೀತಾರಾಮ್ ಕುಲಾಲ್. ‘ದಾಸಿ ಪುತ್ರ’ ಕನ್ನಡ ನಾಟಕದ ಮೂಲಕ ರಂಗಭೂಮಿ ಪ್ರವೇಶಿ ನಂತರ ‘ಪಗೆತ ಪುಗೆ’ ತುಳು ಚಲನಚಿತ್ರಕ್ಕೆ ಸಾಹಿತ್ಯ ಬರೆಯುವುದರೊಂದಿಗೆ ತುಳು ಚಿತ್ರರಂಗದ ಪ್ರವೇಶಿಸಿದರು.
ಅಲ್ಲದೇ ಬಯ್ಯಮಲ್ಲಿಗೆ, ಬೊಳ್ಳಿತೋಟ, ಉಡಲ್ದ ತುಡರ್ ಬದ್ಕದ ಬಿಲೆ, ಕೋಟಿ ಚೆನ್ನಯ, ಬದಿ ಸೇರಿ ಒಟ್ಟು ಹನ್ನೊಂದು ಚಿತ್ರಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಸುಮಾರು 17 ಕನ್ನಡ ಚಾರಿತ್ರಿಕ ನಾಟಕ 6 ಕನ್ನಡ ಪೌರಾಣಿಕ ಸೇರಿ ಒಟ್ಟು 66 ಕೃತಿಗಳನ್ನು ರಚಿಸಿದ್ದಾರೆ.
ಕಲಾವಿದರಾಗಿ ಕಳೆದ 45 ವರ್ಷಗಳಿಂದ ಕಲಾಸೇವೆ ಮಾಡಿದ ಇವರು ತಾವು ರಚಿಸಿರುವ ಯಾವುದೇ ಕೃತಿಗಾಗಲಿ ನಟನೆ ನಾಟಕ ಹಾಗೂ ಹಾಡುಗಳಗಾಗಲಿ ಯಾವುದೇ ರೀತಿಯ ಸಂಭಾವನೆಯನ್ನು ಪಡೆದುಕೊಳ್ಳದೆ ಸೇವೆ ಸಲ್ಲಿಸಿರುವುದು ಇವರ ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ.
ಇವರಿಗೆ ‘ರಂಗಕಲಾಭೂಷಣ’ ‘ತುಳು ರತ್ನ’ ‘ಪೆರ್ಮೆದ ತುಳುವೆ’ ‘ತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿ’ ಇತ್ಯಾದಿ ಹಲವಾರು ಪ್ರಶಸ್ತಿ ಸಂದಿದ್ದು, ಇದರೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
ಬಂಟ್ವಾಳ ತಾಲೂಕಿನ ಕೊಲ್ನಾಡು ಎಂಬ ಪುಟ್ಟ ಗ್ರಾಮದಲ್ಲಿ ಎಂ. ಕಾಂತಪ್ಪ ಮಾಸ್ತರ್ ಮತ್ತು ದೇವಕಿ ದಂಪತಿಯ ಸುಪುತ್ರನಾಗಿ 1940ರಲ್ಲಿ ಜನಿಸಿದ ಸೀತಾರಾಮ್ ಕುಲಾಲ್, ಬಾಲ್ಯದಿಂದಲೂ ನಾಟಕದ ಸಾಹಿತ್ಯ ಕೃಷಿಯನ್ನು ನಡೆಸುತ್ತಾ ಬಂದವರು. ಇದು ಅವರಿಗೆ ರಕ್ತಗತವಾಗಿಯೇ ಒಲಿದಿತ್ತು.
ತಂದೆ ಕಾಂತಪ್ಪ ಮಾಸ್ತರ್ ಮೊದಲು ಅಧ್ಯಾಪಕರಾಗಿದ್ದರು, ಬಳಿಕ ಜಿಲ್ಲಾ ಸಹಕಾರ ಇಲಾಖೆಗೆ ವೃತ್ತಿ ಬದಲಾಯಿಸಿ ನಿವೃತ್ತಿಯಾದರು. ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ ಇವರು 4ನೇ ಮತ್ತು 5ನೇ ತರಗತಿಗೆ ಗಣಿತ ಪಠ್ಯವನ್ನೂ ರಚಿಸಿದ್ದರು. ಉತ್ತಮ ಕವಿಯೂ ಆಗಿದ್ದ ಕಾಂತಪ್ಪ ಮಾಸ್ತರ್ ಎರಡನೇ ಯುದ್ಧದ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ರಚಿಸಿದ್ದ ಕವನವೊಂದಕ್ಕೆ ಆಗಿನ ಮದ್ರಾಸ್ ಸರ್ಕಾರದಿಂದ 100 ರೂಪಾಯಿ ಬಹುಮಾನ ಪಡೆದಿದ್ದರು. ಕಾಂತಪ್ಪ ಮಾಸ್ತರ್ ಒಬ್ಬ ನಾಟಕ ಕಲಾವಿದ ಮಾತ್ರವಲ್ಲದೆ ಉತ್ತಮ ತಬಲಾ ಪಟುವೂ ಆಗಿದ್ದರು.
ಹೀಗಾಗಿಯೇ ತಂದೆಯ ರಕ್ತದಲ್ಲಿ ಹರಿಯುತ್ತಿದ್ದ ಸಾಹಿತ್ಯ, ಪುತ್ರ ಸೀತಾರಾಮ್ ಕುಲಾಲ್ ಅವರ ರಕ್ತದಲ್ಲೂ ಬೆಸೆದುಕೊಂಡಿತ್ತು.
ಸೀತಾರಾಮ್ ಕುಲಾಲ್ ಮೆಟ್ರಿಕ್ ತನಕ ಓದಿ ನಂತರ ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಬಳಿಕ ಸೀನಿಯರ್ ಮ್ಯಾನೇಜರ್ ತನಕ ಹುದ್ದೆಗೇರಿ ನಿವೃತ್ತಿಯಾಗಿದ್ದರು.
ಶನಿವಾರವಷ್ಟೇ ಕರಾವಳಿಯ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ನಿಧನ ವಾರ್ತೆಯ ಬೆನ್ನಲ್ಲೇ ಸೀತಾರಾಮ್ ಕುಲಾಲ್ ಇನ್ನಿಲ್ಲ ಅನ್ನುವ ಸುದ್ದಿ ಬಂದಿದೆ.
Discussion about this post