ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು
ರೈತರ ಜಮೀನನ್ನು ವಕ್ಫ್ ಆಸ್ತಿ ಹೆಸರಲ್ಲಿ ಕಬಳಿಕೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್ ಆರೋಪಿಸಿದ್ದಾರೆ.
ಯಾದಗಿರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ರೈತರ ಜಮೀನಿಗಳು ವಕ್ಫ್ ಆಸ್ತಿ ಎಂದು ಹೇಗೆ ನಮೂದು ಆಯಿತು ಎಂಬುದೇ ಯಕ್ಷ ಪ್ರಶ್ನೆ. ಈ ಕುರಿತು ತನಿಖೆ ನಡೆಯಬೇಕಾಗಿದೆ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಯಾವುದೇ ಪ್ರದೇಶದ ರೈತರಿಗೆ ಅನ್ಯಾಯವಾದರೂ ಅವರ ಪರ ಧ್ವನಿ ಎತ್ತಲಾಗುವುದು. ಸದನದ ಹೊರಗೆ ಮತ್ತು ಒಳಗೆ ಹೋರಾಟ ಸಂಘಟಿಸಲಾಗುವುದು ಎಂದು ಹೇಳಿದರು.
ಯಾದಗಿರಿಯಲ್ಲೇ ವಕ್ಫ್ ಆಸ್ತಿಯನ್ನು ಪ್ರಭಾವಿಗಳು ಕಬಳಿಸಿದ್ದಾರೆ. ವಕ್ಫ್ ಮಂಡಳಿಯವರು ಮೊದಲು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಯಾದಗಿರಿ ಜಿಲ್ಲಾಡಳಿತ ಭವನದ ಸುತ್ತಲಿನ ವಕ್ಫ್ ಆಸ್ತಿಯನ್ನೇ ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿದ ಶಾಸಕ ಶರಣಗೌಡ ಕಂದಕೂರ್, ಈ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.