ದಕ್ಷಿಣ ಕನ್ನಡವನ್ನು ಆಹಾರ ಸಂಸ್ಕರಣಾ ಹಬ್ ಆಗಿ ಪರಿವರ್ತಿಸಿ
ಅಡಿಕೆ, ತೆಂಗು ಸೇರಿ ಹೆಚ್ಚಿನ ತೋಟಗಾರಿಕಾ ಉತ್ಪನ್ನ ಬೆಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯ ಕೇಂದ್ರ ಸ್ಥಾಪಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.
ಈ ಸಂಬಂಧ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಸಂಸದರು ಮನವಿ ಸಲ್ಲಿಸಿದ್ದಾರೆ.
ಸ್ಥಳೀಯ ಕೃಷಿ ಉತ್ಪನ್ನಗಳ ಸಂಸ್ಕರಣೆಗಳಿಗೆ ಅನುಕೂಲವಾಗುವಂತೆ ಆಗ್ರೋ ಪ್ರೊಸೆಸಿಂಗ್ ಇನ್ಕ್ಯುಬೇಷನ್ ಸೆಂಟರ್ ಸ್ಥಾಪಿಸಬೇಕು. ಇದರಿಂದ ಆಗ್ರೋ ಉದ್ಯಮಶೀಲನೆ ಬೆಳೆಸುವ ಜತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬಹುದು. ಜತೆಗೆ, ಆಹಾರ ಸಂಸ್ಕರಣಾ ಉದ್ಯಮ ವಲಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೂ ಅಗತ್ಯ ಕ್ರಮ ಕೈಗೊಳ್ಳಬೇಕು.
ಈ ಮೂಲಕ ದಕ್ಷಿಣ ಕನ್ನಡವನ್ನು ಆಹಾರ ಸಂಸ್ಕರಣಾ ಹಬ್ ಆಗಿ ಪರಿವರ್ತಿಸಬೇಕು ಎಂದು ಸಂಸದರು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.